ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಖರ್ಗೆ, ಸಿದ್ದು, ಡಿಕೆಶಿ, ಮೊಯ್ಲಿ


ನವದೆಹಲಿ,ಮಾ. ೨೪- ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿ ವಿಧಾನಸಭಾ ಚುನಾವಣೆಯಲ್ಲಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪಮೊಯ್ಲಿ, ದಿನೇಶ್ ಗುಂಡೂರಾವ್‌ಗೆ ಹೈಕಮಾಂಡ್ ಅವಕಾಶ ನೀಡಿದೆ.
ತಮಿಳುನಾಡು ರಾಜಕೀಯಕ್ಕೆ ವೀರಪ್ಪಮೊಯ್ಲಿ ಹಳಬರಾಗಿದ್ದು, ಈ ಹಿಂದೆ ಅವರು ತಮಿಳುನಾಡು ಚುನಾವಣೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೂ ತಮಿಳುನಾಡಿನಲ್ಲಿ ಚುನಾವಣಾ ವೇಳೆ ಕೆಲಸ ಮಾಡಿದ್ದಾರೆ. ಈಗ ಈ ಪಟ್ಟಿಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ಥಾನ ಕಲ್ಪಿಸಿರುವುದು ಗಮನಾರ್ಹ.
ತಾರಾ ಪ್ರಚಾರಕರ ಪಟ್ಟಿಯಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ ಪುತ್ರ ರಾಹುಲ್‌ಗಾಂಧಿ, ಪ್ರಿಯಾಂಕಗಾಂಧಿ, ಕೆ.ಎಸ್ ಅಳಗಿರಿ, ಪಿ. ಚಿದಂಬರಂ, ಪಲ್ಲಂರಾಜು, ಮನೀಷ್‌ತಿವಾರಿ, ಶಶಿಕಾಂತ್ ಸೆಂದಿಲ್ ಸೇರಿದಂತೆ ೩೦ ಮಂದಿ ಪ್ರಚಾರದ ಪಟ್ಟಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ತಮಿಳುನಾಡಿನಲ್ಲಿ ಬಿಜೆಪಿ ೨೦ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಸಿ.ಟಿ ರವಿ ಇದ್ದಾರೆ.ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೆ ಸ್ಪರ್ಧಿಸಿರುವ ಅರವಕುರುಚ್ಚಿ ಕ್ಷೇತ್ರದಲ್ಲಿ ಆರ್‌ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಅವರಿಗೂ ಪ್ರಚಾರದ ಜವಾಬ್ದಾರಿ ನೀಡಲಾಗಿದೆ.
ಕೆಲ ತಿಂಗಳ ಹಿಂದೆ ಹೈದ್ರಾಬಾದ್‌ನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರು ಬಿರುಸಿನ ಪ್ರಚಾರ ಕೈಗೊಂಡಿದ್ದರಿಂದ ಹೆಚ್ಚಿನ ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿತ್ತು.
ಏ. ೬ ರಂದು ವಿಧಾನಸಭಾ ನಡೆಯಲಿದ್ದು, ಆಡಳಿತಾರೂಢ ಅಣ್ಣಾ ಡಿಎಂಕೆ ನೇತೃತ್ವದ ಮೈತ್ರಿಕೂಟ ಮತ್ತು ಡಿಎಂಕೆ ನೇತೃತ್ವದ ಮೈತ್ರಿ ಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ನಟ ಹಾಗೂ ರಾಜಕಾರಣಿ ಕಮಲ್‌ಹಾಸನ್ ನೇತೃತ್ವದ ಮಕ್ಕಳ್ ನೀದಿಮಯಂ ಸೇರಿದಂತೆ ಇತರ ಪಕ್ಷಗಳು ಚುನಾವಣಾ ಅಖಾಡದಲ್ಲಿದೆ. ಈ ಬಾರಿ ವಿಜಯದ ಮಾಲೆ ಯಾರಿಗೆ ಎಂಬುದು ತಮಿಳುನಾಡು ರಾಜಕೀಯದಲ್ಲಿ ಕೌತುಕ ಮೂಡಿಸಿದೆ.