ಸ್ಟಾರ್ ಚಂದ್ರು ಪರ ತಾಲ್ಲೂಕು ಕಾಂಗ್ರೆಸ್ ಮನೆ ಮನೆ ಪ್ರಚಾರ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಏ.14: ಮಂಡ್ಯ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ತಾಲೂಕು ಕಾಂಗ್ರೆಸ್ ಪಕ್ಷ ಮನೆಮನೆಯ ಪ್ರಚಾರ ಕಾರ್ಯ ಆರಂಭಿಸಿದೆ.
ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಮತ್ತು ಆಲಂಬಾಡಿ ಕಾವಲು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಮನೆ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಒಳಗೊಂಡ ಕರಪತ್ರಗಳನ್ನು ಮನೆ ಮನೆಗೆ ಹಂಚಿದ ಕಾಂಗ್ರೆಸ್ ಮುಖಂಡರು ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಯಾವುದೇ ಕಾರಣಕ್ಕೂ ಮತ ಹಾಕದಂತೆ ಮನವಿ ಮಾಡಿದರು.
ಗ್ಯಾರಂಟಿ ಯೋಜನೆಗಳ ಕರಪತ್ರ ವಿತರಿಸಿ ಮತದಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಹಾಗೂ ಮುಖಂಡ ಬಿ.ಎಲ್.ದೇವರಾಜು ಗ್ಯಾರಂಟಿ ಯೋಜನೆಗಳಿಂದ ತೀವ್ರ ಬರಗಾಲದ ಸನ್ನಿವೇಶದಲ್ಲಿಯೂ ಗ್ರಾಮೀಣ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಮಹಿಳೆಯರು ತಮ್ಮ ತಮ್ಮ ಕುಟುಂಬಕ್ಕೆ ಅಗತ್ಯವಾದ ಗೃಹ ಬಳಕೆಯ ವಸ್ತುಗಳನ್ನು ಕೊಂಡು ಕೊಳ್ಳುತ್ತಿದ್ದಾರೆ. ಉಚಿತ ಬಸ್ ಪ್ರಯಣ ಸೌಲಭ್ಯದಿಂದ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಭಗವಂತನ ಅನುಗ್ರಹ ಪಡೆಯುತ್ತಿದ್ದಾರೆ. ಉಚಿತ ವಿದ್ಯುತ್ ಸೌಲಭ್ಯದಿಂದ ಕುಟುಂಬದ ಯಜಮಾನನ ಆರ್ಥಿಕ ಹೊರೆ ಕಡಿಮೆಯಾಗಿದೆ. ವಿದ್ಯಾನಿಧಿ ಯೋಜನೆಯ ಮೂಲಕ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗಿದ್ದರೆ ನಿರುದ್ಯೋಗಿಗಳು ಉದ್ಯೋಗಕ್ಕಾಗಿ ಅರ್ಜಿ ಹಾಕಲು ತಂದೆ ತಾಯಂದಿರ ಬಳಿ ಕೈಚಾಚದಂತಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲಾಗುತ್ತದೆ.
ಪ್ರತಿ ಕುಟುಂಬದ ಮಹಿಳೆಯ ಖಾತೆ ವಾರ್ಷಿಕ 01 ಲಕ್ಷ ರೂ ಬರುತ್ತದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಶೇ 50 ರಷ್ಟು ಮೀಸಲಾತಿ ಜಾರಿಗೆ ಬರಲಿದೆಯಲ್ಲದೆ ಈಗಿರುವ ಶೇ 50 ರ ಮೀಸಲಾತಿ ನಿರ್ಭಂದವನ್ನು ತೆಗೆದು ಎಲ್ಲಾ ಹಿಂದುಳಿದ ವರ್ಗಗಳು ಮತ್ತು ಅಲ್ಪ ಸಂಖ್ಯಾತರ ಮಕ್ಕಳು ಸರ್ಕಾರಿ ಉದ್ಯೋಗ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತದೆ. ಸಮ ಸಮಾಜ ನಿರ್ಮಾಣಕ್ಕಾಗಿ ಕ್ಷೇತ್ರದ ಜನ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅವರಿಗೆ ಮತ ಹಾಕುವ ಮೂಲಕ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಳಹಳ್ಳಿ ವಿಶ್ವನಾಥ್, ಐಪನಹಳ್ಳಿ ಬಿ.ನಾಗೇಂದ್ರ ಕುಮಾರ್, ಮುಖಂಡರಾದ ವಕೀಲ ಚಟ್ಟಂಗೆರೆ ನಾಗೇಶ್, ರಾಜು, ಚೌಡಸಮುದ್ರ ಚಂದ್ರು, ಗುಡುಗನಹಳ್ಳಿ ಶ್ರೀನಿವಾಸ್, ರಾಯಪ್ಪ, ಮಾಂಬಳ್ಳಿ ಮೀಸೆ ಸ್ವಾಮಣ್ಣ, ರಾಮಣ್ಣ, ಕಟ್ಟೆಕ್ಯಾತನಹಳ್ಳಿ ಜಗದೀಶ್, ಪ್ರಕಾಶ್, ಬೆಳತೂರು ಲೋಕೇಶ್, ಪುರ ಸುರೇಶ್ ಸೇರಿದಂತೆ ಹಲವರು ಮನೆ ಮನೆ ಪ್ರಚಾರದಲ್ಲಿದ್ದರು.