ಸ್ಟಾಂಪ್ ವೆಂಡರ್ ಕಮಿಷನ್ ಹೆಚ್ಚಳಕ್ಕೆ ಒತ್ತಾಯ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.26:- ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿರುವುದರ ಆಧಾರದಲ್ಲಿ ಸ್ಟಾಂಪ್‍ವೆಂಡರ್‍ಗಳಿಗೆ ಕಮಿಷನ್ ಮೊತ್ತವನ್ನು ಪರಿಷ್ಕರಣೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ.ರಾಜು ಅವರು ಸರ್ಕಾರವನ್ನು ಒತ್ತಾಯಿಸಿದರು.
ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ವತಿಯಿಂದ ನಗರದ ಇನ್‍ಸ್ಟಿಟ್ಯೂಟದದ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಈಡಿಗ ಸಮಾಜದ 26 ಒಳಪಂಗಡಗಳ ಸಹಕಾರ ಸಂಘಗಳ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶುಲ್ಕ ಹೆಚ್ಚಳದಿಂದ ಆಗಿರುವ ಏರಿಳಿತಗಳ ಬಗ್ಗೆ ಈಗಾಗಲೇ ನಮ್ಮ ಮಂಡಳದ ವತಿಯಿಂದ ಕೆಲವು ಕಡೆ ಸ್ಟಾಂಪ್‍ವೆಂಡರ್‍ಗಳಿಗೆ ಆನ್‍ಲೈನ್ ಮೂಲಕ ಅರಿವು ಮೂಡಿಸಲಾಗಿದೆ. ಮುಂದೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸುವ ಆಲೋಚನೆ ಇದೆ ಎಂದು ಅವರು ತಿಳಿಸಿದರು.
ಸಹಕಾರಿ ವಲಯ ಈಗಲೂ ಪ್ರಬಲರ ಕೈಯಲ್ಲೇ ಇದೆ. ಹಿಂದುಳಿದವರು, ಸಣ್ಣ-ಸಣ್ಣ ಜಾತಿಗಳಿಗೆ ಆ ಕ್ಷೇತ್ರದಲ್ಲಿ ಹೆಚ್ಚು ಪ್ರಾತಿನಿಧ್ಯ ದೊರಕಿಲ್ಲ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಪಟ್ಟರೆ ಅಧಿಕಾರವನ್ನು ಪಡೆದುಕೊಳ್ಳಬಹುದು ಎಂದು ಸಲಹೆ ನೀಡಿದರು.
ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಕುಳಾಯಿ ಪೌಂಡೇಶನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ ಮಾತನಾಡಿ, ನಮ್ಮ ಸಮಾಜದವರು ಧ್ವನಿ ಎತ್ತುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಒಳಪಂಗಡಗಳ ಆಗು-ಹೋಗುಗಳಿಗೆ ಹೆಗಲುಕೊಡುವಂತಹ ಕೆಲಸ ಮಾಡಬೇಕು. ಆಗ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸಹಕಾರಿ ಪ್ರಶಸ್ತಿ:
ಭಾರತ್ ಕೋ ಆಪರೇಟಿವ್ ಬ್ಯಾಂಕ್, ಅತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ, ಸುಧಾ ಕೋ ಆಪರೇಟಿವ್ ಬ್ಯಾಂಕ್ ಹಾಗೂ ಉದ್ಯಮಿಗಳಾದ ಎನ್.ವಿ.ಕುಮಾರ್, ಅಶೋಕ್ ಪೂಜಾರ್ ಅವರಿಗೆ ಜೆ.ಪಿ.ನಾರಾಯಣಸ್ವಾಮಿ ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ಪ್ರಧಾನ ಕಾರ್ಯದರ್ಶಿ ಕಾಂತರಾಜ ಅರ್ಯ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಗುತ್ತೇದಾರ್, ಉಪಾಧ್ಯಕ್ಷ ಇ.ಮಂಜುನಾಥ್, ನವೀನ್ ಚಂದ್ರ ಪೂಜಾರಿ, ರಂಗಕರ್ಮಿ ರಾಜಶೇಖರ ಕದಂಬ, ಉದ್ಯಮಿಗಳಾದ ವಸಂತಕುಮಾರ್, ಶ್ರೀಕಾಂತ್ ವಿರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.