ಸ್ಕೌಟ್ ಗೈಡ್ ನಿಯಮದಂತೆ ನಡೆಯುತ್ತೇನೆ: ಈಶ್ವರಿ

ಬೀದರ.ಮಾ.27: ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ, ತಪ್ಪು ನಿರ್ಧಾರ ತೆಗೆದುಕೊಂಡು, ಜನ್ಮ ಕೊಟ್ಟ ತಂದೆ ತಾಯಿಗೆ, ವಿದ್ಯಾ ಗುರುಗಳಿಗೆ, ಬಂಧು-ಬಾಂಧವರಿಗೆ ಮತ್ತು ಸಹಪಾಠಿಗಳಿಗೆ ಮುಜುಗರ ತರುವುದಿಲ್ಲ. ಕಾರಣ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಧೈರ್ಯವಂತರಾಗಿತ್ತಾರೆ. ಎಂದು ದೀಕ್ಷೆ ಪಡೆದ ಗೈಡ್ ವಿದ್ಯಾರ್ಥಿನಿ ಈಶ್ವರಿ ಪ್ರತಿಜ್ಞೆ ಮಾಡಿದಳು.

ಔರಾದ ತಾಲೂಕಿನ ಜೋಜನಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ಕ್ಯಾಪ್ಟನ್ ಗೀತಾ ವಿಜಯಕುಮಾರ ಜೋಜನೆರವರ ನೇತೃತ್ವದಲ್ಲಿ ನಡೆದ ಅಕ್ಕ ಮಾಹಾದೇವಿ ಗೈಡ್ ಕಂಪನಿ ವಿದ್ಯಾರ್ಥಿಗಳಾದ ಈಶ್ವರಿ ಮತ್ತು ದೇವಿಕಾ ರವರು ಗೈಡ್ ದೀಕ್ಷೆ ಪಡೆದು ಈ ರೀತಿ ಪ್ರತಿಜ್ಞೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ಕೌಟ್ ಸಂಘಟನಾ ಆಯುಕ್ತ ಕೆ.ಎಸ್. ಚಳಕಾಪುರೆ ಮಾತನಾಡಿ, ಸಾಮಾನ್ಯವಾಗಿ ಪಾಲಕರು, ತಮ್ಮ ಮಕ್ಕಳು ವಿದ್ಯಾವಂತರಾಗಿ, ನೌಕರಿ ಪಡೆದು, ವಯಸ್ಸಾದಾಗ ನಮಗೆ ಚೆನ್ನಾಗಿ ನೋಡಿಕೊಳ್ಳಲಿ ಎಂದು ಇಚ್ಛೆ ಪಡುತ್ತಾರೆ. ಆದರೆ ಸ್ಕೌಟ್ ಗೈಡಿಗೆ ಸೇರಿಸಿದ ಪಾಲಕರು, ನಮ್ಮ ಮಕ್ಕಳು ಕೇವಲ ನಮ್ಮ ಆಸ್ತಿಯಾಗದೇ, ದೇಶದ ಆಸ್ತಿಯಾಗಲಿ. ಇವರಿಂದ ನೂರಾರು ಜನರಿಗೆ ಒಳ್ಳೆಯದಾಗಲಿ ಎಂದು ದೊಡ್ಡ ಮನಸ್ಸು ಮಾಡುತ್ತಾರೆ. ಅಂಥವರ ಸಂಖ್ಯೆ ಹೆಚ್ಚಾಗಲಿ ಮತ್ತು ಗ್ರಾಮೀಣ ಭಾಗದ ಮಕ್ಕಳು ಉತ್ತಮ ನಾಗರಿಕರಾಗಲು ಹತ್ತು ಗೈಡ್ ಮಕ್ಕಳಿಗೆ ಸಮವಸ್ತ್ರ ದೇಣಿಗೆ ನೀಡಿದ ಮೀನಕೇರಾದ ಕೊಪ್ಪದಮ್ಮ ಧರ್ಮಕ್ಷೇತ್ರ ಟ್ರಸ್ಟಿನ ಅಧ್ಯಕ್ಷೆ ಭವಾನಿ ಮಂಜುನಾಥ್ ಮತ್ತು ಶಾಲಾ ಸೌಂದರ್ಯದ ಜೊತೆ ವಿದ್ಯಾರ್ಥಿಗಳ ಆಂತರಿಕ ಸೌಂದರ್ಯ ಹೆಚ್ಚಿಸಲು ಗೈಡ್ ದಳ ಪ್ರಾರಂಬಿಸಲು ಶಿಕ್ಷಕರ ಮನವುಲಿಸಿದ ಮಾತೃ ಹೃದಯಿ ಮುಖ್ಯಗುರು ಸುನೀತಾ ಪಾಟೀಲ್ ರವರಿಗೆ ಜಿಲ್ಲಾ ಸಂಸ್ಥೆಯ ಮತ್ತು ಶಿಕ್ಷಣ ಇಲಾಖೆಯ ಪರವಾಗಿ ಧನ್ಯವಾದಗಳು ತಿಳಿಸಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್ ಸ್ಕಾರ್ಪ ತೊಡಿಸಿ, ಮಾತನಾಡಿ, ಸರ್ಕಾರಿ ಆದೇಶದಂತೆ ಮಕ್ಕಳಿಗೆ ಸಮವಸ್ತ್ರಕ್ಕಾಗಿ ಅನುದಾನ ನೀಡುತ್ತೇನೆ ಎಂದು ತಿಳಿಸಿದರು.

ಗ್ರಾಮ ಪಂಚಾಯತ್ ಸದಸ್ಯ ಘಾಳರಡ್ಡಿ, ಸಿಹಿ ತಿನಿಸಿದರು. ಸಿ.ಆರ್.ಪಿ ಗಫಾರ್ಸಾಬ್, ಉಪಾಧ್ಯಕ್ಷೆ ಲಕ್ಷ್ಮಿ ಸ್ಕೌಟ್ ಮಾಸ್ಟರ್ ಶಿವಕುಮಾರ ಮೆಣಸೆ, ವಿಜಯಕುಮಾರ್, ಸಿಬ್ಬಂದಿಗಳಾದ ಪ್ರದೀಪ್, ಭಾರತಿ, ಗೋವಿಂದ ಮತ್ತು ಮಲ್ಲಯ್ಯ ಮತ್ತು ಪಾಲಕರು ಇದ್ದರು. ನಂತರ ಎಸ್.ಡಿ.ಎಮ್.ಸಿ ತರಬೇತಿ ನಡೆಯಿತು.