ಸ್ಕೌಟ್ಸ್, ಗೈಡ್ಸ್ ಮುಂಚೂಣಿ ಸಂಸ್ಥೆ

ಚನ್ನಪಟ್ಟಣ, ಏ.೨೭: ಸ್ವಾತಂತ್ರ್ಯ ಪೂರ್ವದಿಂದಲೂ ದೇಶ ಕಟ್ಟುವಲ್ಲಿ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಮುಂಚೂಣಿಯಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ದೇಶದ ಕೆಲವೇ ಸಂಸ್ಥೆಗಳ ಪೈಕಿ ಒಂದಾಗಿದೆ ಎಂದು ಸಂಸ್ಥೆಯ ರೋವರ್ಸ್ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ ಪ್ರಭು ಉಪಾಸೆ ತಿಳಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ರೋವರ್ಸ್ ಅಂಡ್ ರೇಂಜರ್ಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯು ಒಂದು ಚಳವಳಿಯ ರೂಪವಾಗಿದೆ. ಭಾರತದಲ್ಲಿ ೧೯೦೭ ರಲ್ಲಿ ಆರಂಭವಾಗಿ ೧೯೧೭ ರಲ್ಲಿ ಅಧಿಕೃತವಾಗಿ ಆರಂಭವಾಗಿ ಇಲ್ಲಿಯವರೆಗೂ ಪರಿಸರ ಮತ್ತು ದೇಶಕ್ಕಾಗಿ ದುಡಿಯುತ್ತಾ ಬಂದಿದೆ. ಪ್ರತಿ ಕಾಲೇಜುಗಳ ಹದಿನೆಂಟರಿಂದ ಇಪ್ಪತೈದು ವರ್ಷದೊಳಗಿನ ವಿದ್ಯಾರ್ಥಿಗಳು ಸೇರಿ, ಬೆಟ್ಟ, ಗುಡ್ಡ, ನದಿ ಸ್ವಚ್ಚತೆಯ ಜೊತೆಗೆ ಪರಿಸರ ಕಾಪಾಡಲು ಪಣ ತೊಡಬೇಕು. ಇದರಿಂದ ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ತಮ್ಮ ವೃತ್ತಿ ಮತ್ತು ಖಾಸಗಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತರಬೇತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಾಮಾಜಿಕ ಹೋರಾಟಗಾರ ಗೋ ರಾ ಶ್ರೀನಿವಾಸ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯದಲ್ಲಿ ಕಲಿಯುವುದಷ್ಟೇ ಶಿಕ್ಷಣವಲ್ಲಾ, ಎಲ್ಲಾ ರೀತಿಯ ಜನರ ನಡುವೆ ಬೆರೆತು ಕಲಿಯುವ ಸಾಮಾನ್ಯ ಜ್ಞಾನ ಬಹಳ ಮುಖ್ಯವಾದುದಾಗಿದೆ. ಪ್ರತಿ ವಿದ್ಯಾರ್ಥಿಗಳು ಪರಿಸರಕ್ಕೆ ಒತ್ತು ನೀಡುವ ಮೂಲಕ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯ ಉದ್ದೇಶ ಈಡೇರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ ವಿ. ವೆಂಕಟೇಶ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಮೂರೂವರೆ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಓದು, ಕ್ರೀಡೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎನ್‌ಸಿಸಿ ತಂಡ ಸಹ ಬರಲಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಯುತ್ತಿರುವುದು ತಾಲ್ಲೂಕಿನ ಹೆಮ್ಮೆಯ ಸಂಗತಿಯಾಗಿದೆ ಎಂದು ಅಭಿಪ್ರಾಯ ಪಟ್ಟರು.