ಸ್ಕೌಟ್ಸ್ ಗೈಡ್ಸ್‌ನಿಂದ ಶಿಕ್ಷಣ ಅಭಿವೃದ್ಧಿ

ಕೋಲಾರ, ಸೆ.೧೪:ಶಾಲಾ ಮಕ್ಕಳಲ್ಲಿ ಬಾಲ್ಯದಿಂದಲೇ ಮೌಲ್ಯ ಶಿಕ್ಷಣ ಹಾಗೂ ಕೌಶಲ ಶಿಕ್ಷಣವನ್ನು ರೂಡಿಸಲು ಸ್ಕೌಟ್ಸ್ ಗೈಡ್ಸ್ ಶಿಕ್ಷಣ ಸಹಕಾರಿಯಾಗಿದೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆಯ ಜಿಲ್ಲಾ ಮುಖ್ಯ ಆಯುಕ್ತರಾದ ಕೆ.ವಿ.ಶಂಕರಪ್ಪ ಅಭಿಪ್ರಾಯ ಪಟ್ಟರು.
ಕೋಲಾರ ನಗರದ ಸ್ಕೌಟ್ ಭವನದಲ್ಲಿ ಶಾಲಾ ಶಿಕ್ಷಕರಿಗೆ ಆಯೋಜನೆ ಮಾಡಿದ್ದ ಮೂಲತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಶಾಲಾ ಶಿಕ್ಷಕರು ಮನಸ್ಸು ಮಾಡಿ ಸ್ಕೌಟ್ಸ್ ಗೈಡ್ಸ್ ಶಿಕ್ಷಣವನ್ನು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಕ್ಕಳಿಗೂ ಸಿಗುವಂತೆ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಲ್ಲಿ ಮೂರು ವರ್ಷದ ಮಕ್ಕಳಿಂದ ಇಪ್ಪತೈದು ವರ್ಷದ ಯುವಜನತೆಯವರೆಗೂ ಶಿಕ್ಷಣವನ್ನು ಚಳುವಳಿಯ ರೂಪದಲ್ಲಿ ನೀಡಲಾಗುತ್ತಿದೆ. ಎಲ್ಲಾ ಶಿಕ್ಷಕರು ಮತ್ತು ಸ್ವಯಂಸೇವಕರು ತರಬೇತಿ ಪಡೆಯುವ ಮುಕ್ತವಾದ ಅವಕಾಶವಿದೆ. ಶಿಕ್ಷಣ ಇಲಾಖೆಯ ಅಧಿಕಾರಿಗಳ ಮತ್ತು ಶಿಕ್ಷಕರ ಸಹಕಾರದಿಂದ ಜಿಲ್ಲೆಗೆ ರಾಜ್ಯದಲ್ಲಿ ಉತ್ತಮ ಸ್ಥಾನವಿದೆ.ಮತ್ತಷ್ಟು ಸೇವಾ ಕಾರ್ಯಗಳನ್ನು ಮಾಡಲು ತಮ್ಮ ಸಹಕಾರ ಅಗತ್ಯ ಎಂದು ತಿಳಿಸಿದರು.
ಸ್ಕೌಟ್ ಆಯುಕ್ತ ಕೆ.ಆರ್.ಸುರೇಶ್ ರವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ನಾಯಕತ್ವ ಗುಣಗಳು, ದೇಶಭಕ್ತಿ, ಸೇವಾ ಮನೋಭಾವ, ಸಹಕಾರ ಮನೋಭಾವ ಮುಂತಾದ ಗುಣಗಳನ್ನು ರೂಡಿಸಬಹುದಾಗಿದೆ ಎಂದು ತಿಳಿಸಿದರು.
ಶಿಬಿರದ ನಾಯಕರಾದ ನಂಜುಂಡಪ್ಪ,ಉಮಾದೇವಿ,ಗೌರಾಭಾಯಿ,ಸ್ಕೌಟ್ ಬಾಬು, ಸಹನಾಯಕರಾದ ಮುನಿನಾರಾಯಣಪ್ಪ, ನಾರಾಯಣಸ್ವಾಮಿ, ಸಂಪತ್ ಕುಮಾರ್, ರವೀಂದ್ರ, ಮಂಜುನಾಥ್, ನಾಗಲಕ್ಷ್ಮಿಬಾಯಿ, ಚಿಕ್ಕರೆಡ್ಡಪ್ಪ, ಭಾರತಿ, ಪಧಾದಿಕಾರಿಗಳಾದ ಲಕ್ಷ್ಮಿ, ವಿಠಲ್ ರಾವ್, ವಿಶ್ವನಾಥ್, ವಿನಯ್ ಮುಂತಾದವರು ಉಪಸ್ಥಿತರಿದ್ದರು.