ಸ್ಕೌಟ್ಸ್,ಗೈಡ್ಸ್ ಕಾರ್ಯ ಶ್ಲಾಘನೀಯ-ಜಗದೀಶ್

ಗೌರಿಬಿದನೂರು.ನ೨೦-ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸದಾ ಸೇವೆಯನ್ನು ನೀಡುವ ಮೂಲಕ ಪ್ರಗತಿಗೆ ಆಸರೆಯಾಗುವ ಸ್ಕೌಟ್ ಮತ್ತು ಗೈಡ್ ಸಂಸ್ಥೆಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಬಿಆರ್ ಪಿ ಎಚ್.ಜಗದೀಶ್ ತಿಳಿಸಿದರು.
ನಗರದ ಕೋಟೆ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆ ನಡೆಸುವ ಪ್ರತೀ ಕಾರ್ಯಕ್ರಮದಲ್ಲಿ ಸ್ಕೌಟ್ ಮತ್ತು ಗೈಡ್ ನ ಸದಸ್ಯರು ಭಾಗವಹಿಸಿ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಾರೆ. ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಮಯದಲ್ಲಿ ಸ್ಥಳೀಯ ಸಂಸ್ಥೆಯ ಸದಸ್ಯರುಗಳು ಇಲಾಖೆಯೊಂದಿಗೆ ಭಾಗಿಯಾಗಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಸ್ಯಾನಿಟರೈಸ್ ಮಾಡುವುದು, ನಡುವಿನ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸುವ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಕಾರ್ಯ ಮತ್ತಷ್ಟು ಕ್ಷೇತ್ರಗಳಿಗೆ ಉಪಯುಕ್ತವಾಗಲಿ ಎಂದು ಹೇಳಿದರು.
ಸ್ಕೌಟ್ ಮತ್ತು ಗೈಡ್ ನ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಇ.ಸಿದ್ದೇಶ್ವರ ಮಾತನಾಡಿ, ಸ್ಥಳೀಯ ಸಂಸ್ಥೆಯ ಸದಸ್ಯರುಗಳು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಯೋಧರಂತೆ ಸೇವೆ ಮಾಡಲು ಸಿದ್ಧರಿರುತ್ತಾರೆ. ಕಾರ್ಯಕ್ರಮದ ಆರಂಭದಿಂದ ಅಂತ್ಯದವರೆಗೂ ಪ್ರತಿಯೊಂದು ಕಾರ್ಯದಲ್ಲಿ ಹಂತಹಂತವಾಗಿ ಭಾಗವಹಿಸಿ ಯಶಸ್ವಿಗೆ ಕಾರಣಕರ್ತರಾಗುತ್ತಾರೆ ಎಂದು ಹೇಳಿದರು.
ಇದೇ ವೇಳೆ ಶಿಕ್ಷಕರಾದ ಹನುಮಂತರೆಡ್ಡಿ, ಬಿ.ಸಂವೀವರಾಯಪ್ಪ, ಎನ್.ಆರ್.ಮಂಜುನಾಥ್, ಲಕ್ಷ್ಮಿ ಹೊನ್ನಪ್ಪ ಇತರರು ಇದ್ದರು.