ಸ್ಕೂಲ್ ಸ್ಟ್ಯಾಂಡರ್ಡ್ ರೆಗ್ಯುಲೇಟರಿ ಅಥಾರಿಟಿ ಸ್ಥಾಪನೆ ಆಗಬೇಕು : ಶಶಿಕುಮಾರ ಆಗ್ರಹ

ಅಥಣಿ :ಸೆ.3: ಕಡಿಮೆ ಸಂಬಳದಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವ ಅನುದಾನ ರಹಿತ ಖಾಸಗಿ ಶಾಲೆಗಳ ಮೇಲೆ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ನಿರಂತರ ಗದಾ ಪ್ರಹಾರ ನಡೆಸುತ್ತಾ ಬರುತ್ತಿದೆ. ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಇಲ್ಲದ ಮಾನದಂಡಗಳನ್ನು ಖಾಸಗಿ ಶಾಲೆಗಳಿಗೆ ಒತ್ತಾಯಪೂರ್ವಕವಾಗಿ ಹೇರುವ ಮೂಲಕ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ (ಕಾಮ್ಸ್) ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆರೋಪಿಸಿದರು,

ಅವರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ವಿದ್ಯಾವರ್ಧಕ ಶಾಲೆಯಲ್ಲಿ ಕರ್ನಾಟಕ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ (ಕಾಮ್ಸ್) ತಾಲೂಕಾ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ನಿಮಿತ್ತವಾಗಿ ಅಥಣಿ ತಾಲೂಕಾ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ ವಿಚಾರ ಸಂಕೀರ್ಣ ಹಾಗೂ ಗುರು ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.ರಾಷ್ಟ್ರೀಯ ಶಿಕ್ಷಣ ನೀತಿಯು ನಮ್ಮ ಕರ್ನಾಟಕ ರಾಜ್ಯದ ಕಲ್ಪನೆಯೇ ಆಗಿರುವುದರಿಂದ ಮತ್ತು ಮಕ್ಕಳ ಶಿಕ್ಷಣದ ಹಿತ ದೃಷ್ಟಿಯಿಂದ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಂಡು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕು, ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಜ್ಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಮಕ್ಕಳು ಶಿಕ್ಷಣದ ಹಿತದೃಷ್ಟಿಯಿಂದ ಅದರಲ್ಲಿರುವ ಚಾಪ್ಟರ್ 1,2 ಮತ್ತು 3ರ ಅಂಶಗಳನ್ನು ಯಥಾವತ್ತಾಗಿ ಅನುಷ್ಠಾನ ಗೊಳಿಸಬೇಕು. ನೀತಿಯ 4ರ ಅಂಶದಲ್ಲಿ ನಮ್ಮ ಶಿಕ್ಷಕರಿಗೆ ಇರಬೇಕಾದ ಅರ್ಹತೆಯ ಬಗ್ಗೆ ಸೂಕ್ಷ್ಮತೆಯಿಂದ ಪರಿಷ್ಕರಣೆ ಗೊಳಿಸಬೇಕು. ಇನ್ನು 8ರ ಅಂಶದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಗುಣಮಟ್ಟ ಶಿಕ್ಷಣ ನೀಡುವಲ್ಲಿ ಪ್ರತ್ಯೇಕವಾಗಿ ಸ್ಕೂಲ್ ಸ್ಟ್ಯಾಂಡರ್ಡ್ ರೇಗುಲೇಟರಿ ಅಥಾರಿಟಿ ಸ್ಥಾಪನೆ ಆಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೋವಿಡ್ ಸಂದರ್ಭದಲ್ಲಿ 500 ದಿನಗಳ ಕಾಲ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಅನುಭವಿಸಿದ ಕಷ್ಟವನ್ನು ಸರ್ಕಾರಿ ಶಾಲೆಯ ಶಿಕ್ಷಕರು ಅನುಭವಿಸಿಲ್ಲ. ಬೆರಳೆಣಿಕೆಯಷ್ಟು ಖಾಸಗಿ ಶಾಲೆಗಳು ಶಿಕ್ಷಣವನ್ನು ವ್ಯಾಪಾರೀಕರಣ ಮಾಡಿಕೊಂಡಿದ್ದು, ಒಂದು ಮಗುವಿನ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಸುಲಿಗೆ ಮಾಡುತ್ತಿರುವ ಶೇ.2 ರಷ್ಟು ಖಾಸಗಿ ಸಂಸ್ಥೆಗಳ ಧೋರಣೆಯನ್ನು ರಾಜ್ಯ ಸರ್ಕಾರ ಕಡಿಮೆ ಶುಲ್ಕದಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಶೇ.98ರಷ್ಟು ಶಿಕ್ಷಣ ಸಂಸ್ಥೆಗಳಿಗೆ ಅಂಕುಶ ಹಾಕುತ್ತಿರುವುದು ಯಾವ ನ್ಯಾಯ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೂಡ ಅನೇಕ ಉತ್ತಮ ಶಿಕ್ಷಕರಿದ್ದು ಅವರಿಗೂ ಕೂಡ ಸರ್ಕಾರ ತಮ್ಮ ಮಾನದಂಡಗಳಲ್ಲಿ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಅಗ್ರಹಿಸಿದರು.
ಶಿಕ್ಷಕರು ಸಂಬಳಕ್ಕಾಗಿ ಸೇವೆ ಸಲ್ಲಿಸದೆ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಮನಃಸಾಕ್ಷಿಯಿಂದ ವಿದ್ಯೆ ಕಲಿಸಬೇಕು. ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು, ದೇಶಭಕ್ತರ ಕಥೆಗಳನ್ನು, ಜೀವನ ಚರಿತ್ರೆಯನ್ನು ಕಲಿಸಿಕೊಡಬೇಕು. ಶಾಲಾ ಕೋಣೆಗಳ ಗುಣಮಟ್ಟಕ್ಕಿಂತಲೂ ಶಿಕ್ಷಕರಲ್ಲಿರುವ ನೈತಿಕ ಮೌಲ್ಯ ಮತ್ತು ಕಲಿಕೆಯ ಗುಣಮಟ್ಟ ಬಹಳ ಮಹತ್ತರವಾದದ್ದು, ಮಕ್ಕಳ ಮನಸ್ಸನ್ನು ಅರಿತು ಅವರಿಗೆ ತಿಳಿಯುವ ರೀತಿಯಲ್ಲಿ ಪಾಠವನ್ನು ಹೇಳಿಕೊಡಬೇಕು. ತಂತ್ರಜ್ಞಾನ ಬೆಳದಂತೆ ಶಿಕ್ಷಣದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಗಳ ಮೂಲಕ ಉತ್ತಮ ಶಿಕ್ಷಣ ಕಲಿಸಿ ಕೊಡಬೇಕೆಂದು ಕರೆ ನೀಡಿದರು.
ಸಮಾರಂಭವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಮೋರಟಗಿ ಉದ್ಘಾಟಿಸಿ ಮಾತನಾಡಿದರು,
ಕಾಮ್ಸ್ ನ ಅಥಣಿ ತಾಲೂಕಾ ಘಟಕದ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಅಥಣಿ ತಾಲೂಕಿನಲ್ಲಿ ಕಳೆದ ಏಳು ವರ್ಷಗಳಿಂದ ಈ ಸಂಘಟನೆಯನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ನೀಡುವ ಆದರ್ಶ ಶಿಕ್ಷಕ ಪ್ರಶಸ್ತಿಯಲ್ಲಿ ಖಾಸಗಿ ಶಾಲಾ ಶಿಕ್ಷಕರನ್ನು ಪರಿಗಣಿಸುವಂತೆ ನಾವು ಅನೇಕ ಬಾರಿ ಮನವಿ ಮಾಡಿದರೂ ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿಲ್ಲ. ಹೀಗಾಗಿ ನಮ್ಮ ಸಂಘಟನೆ ವತಿಯಿಂದ ಪ್ರತಿ ವರ್ಷ ಗುರು ಸೇವಾರತ್ನ ಪ್ರಶಸ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉತ್ತಮ ಶಿಕ್ಷಕ ಶಿಕ್ಷಕಿಯರಿಗೆ 2023ರ ಸಾಲಿನ ” ಗುರು ಸೇವಾರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಅಥಣಿ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನೀಲ್ ಶಿವಣಗಿ, ಬಣಜವಾಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಬಣಜವಾಡ, ಆದರ್ಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾವಸಾಬ ಐಹೊಳೆ, ಯುವ ಮುಖಂಡ ಶಿವಾನಂದ ಗುಡ್ಡಾಪುರ, ಜವಳಿ ಉದ್ಯಮಿ ರಮೇಶ ಬುಲಬುಲೆ, ಡಿ ಡಿ ಮೇಕನಮರಡಿ, ಕೆ ಬಿ ಜಾಲವಾದಿ, ಮುತ್ತಪ್ಪ ಬಡಿಗೇರ, ಆರ್ ಎಂ ಪಾಟೀಲ, ರಾಜಕುಮಾರ ದಳವಾಯಿ. ಆನಂದ್ ಕುಲಕರ್ಣಿ, ಸದಾಶಿವ ಚಿಕ್ಕಟ್ಟಿ, ಎನ್ ಎ ಪಾಟೀಲ, ವಿಜಯ ಹುದ್ದಾರ. ಕಾನೂನು ಸಲಹೆಗಾರ ಎಸ್ ಎಮ್ ಲಕ್ಷ್ಮೇಶ್ವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಡಿ ಡಿ ಮೇಕನಮರಡಿ ಸ್ವಾಗತಿಸಿ ಪರಿಚಯಿಸಿದರು. ಚಿದಾನಂದ ಪಾಟೀಲ ನಿರೂಪಿಸಿದರು. ಎ ಎಸ್ ಜೋಶಿ ವಂದಿಸಿದರು.

#

ಅತ್ಯಂತ ಕಡಿಮೆ ಸಂಬಳದಲ್ಲಿ ಗುಣಾತ್ಮಕ ಶಿಕ್ಷಣವನ್ನು ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗು ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮ ಮತ್ತು ಮಾನದಂಡಗಳನ್ನು ಖಾಸಗಿ ಶಾಲೆಗಳ ಮೇಲೆ ಒತ್ತಾಯಪೂರ್ವಕಾಗಿ ಹೇರುತ್ತಿರುವುದು ಬೇಸರದ ಸಂಗತಿಯಾಗಿದೆ. ರಾಜ್ಯ ಸರ್ಕಾರ ಇತ್ತೀಚಿಗೆ ಮಾಡಿರುವ ನಿಯಮಗಳಿಂದ ಸನ್ 2017-18 ರ ಪೂರ್ವದಲ್ಲಿ ಆರಂಭಗೊಂಡಿರುವ ಹತ್ತಾರು ಸಾವಿರ ಖಾಸಗಿ ಶಾಲೆಗಳು ಅನಧಿಕೃತವಾಗುವ ಭೀತಿಯಲ್ಲಿವೆ. ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಲೆಕ್ಕಿಸದೆ ರಾಜ್ಯ ಸರ್ಕಾರ ಶಾಲೆಗಳ ಮಾನ್ಯತೆ ಮತ್ತು ನವೀಕರಣವನ್ನು ತಿರಸ್ಕರಿಸುವ ಹುನ್ನಾರ ನಡೆಸಿದೆ. ಇದರಿಂದ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿದಂತಾಗಿದ್ದು, ರಾಜ್ಯ ಸರ್ಕಾರ, ಶಿಕ್ಷಣ ಸಚಿವರು ಸಂಕಷ್ಟದಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ಗಮನ ಹರಿಸಿ ಅವುಗಳ ರಕ್ಷಣೆಗೆ ಮುಂದಾಗಬೇಕು,,

         - ಡಿ. ಶಶಿಕುಮಾರ್, 
   ರಾಜ್ಯ ಪ್ರಧಾನ ಕಾರ್ಯದರ್ಶಿ. ಕಾಮ್ಸ್,
#

ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳು ಎಂಬ ಭೇದಭಾವ ಮಾಡದೇ ಮಕ್ಕಳ ಸವಾರ್ಂಗೀಣ ಬೆಳವಣಿಗೆಗೆ ಆದ್ಯತೆ ನೀಡಬೇಕಾಗುತ್ತದೆ. ಒಂದೆಡೆ ಸರ್ಕಾರದ ನಿಯಮಗಳು, ಇನ್ನೊಂದೆಡೆ ಮಕ್ಕಳ ಶೈಕ್ಷಣಿಕ ಹಿತದೃಷ್ಟಿ, ಮತ್ತೊಂದೆಡೆ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿತುಕೊಂಡು ನಾವು ಅಧಿಕಾರ ನಿಭಾಯಿಸ ಬೇಕಾಗುತ್ತದೆ. ಅಥಣಿ ತಾಲೂಕಿನಲ್ಲಿರುವ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಆಡಳಿತ ಮಂಡಳಿಯವರು ಕಾನೂನು ವ್ಯಾಪ್ತಿಯಲ್ಲಿ ಮಕ್ಕಳ ಪಾಲಕರಿಗೆ ಹೊರೆಯಾಗದಂತೆ ಶುಲ್ಕವನ್ನು ನಿಗದಿಪಡಿಸಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು,

      --- ಎಂ ಬಿ ಮೋರಟಗಿ.
     ಕ್ಷೇತ್ರ ಶಿಕ್ಷಣಾಧಿಕಾರಿ ಅಥಣಿ