ಸ್ಕೂಲ್ ಬಸ್ ಡಿಕ್ಕಿ: ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯ

ಕಲಬುರಗಿ,ಸೆ.6-ನಗರ ಹೊರವಲಯದ ಕೇಂದ್ರ ಕಾರಾಗೃಹ ಸಮೀಪದ ಸಿನ್ನೂರ್ ಹತ್ತಿರ ಇಂದು ಬೆಳಿಗ್ಗೆ ಸ್ಕೂಲ್ ಬಸ್ ಬೈಕ್‍ಗೆ ಡಿಕ್ಕಿ ಹೊಡೆದು ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ದೋರನಹಳ್ಳಿ ಗ್ರಾಮದ ನಾಗೇಂದ್ರಸಿಂಗ್ (22) ಮತ್ತು ಮಾರ್ತಾಂಡ (20) ಗಾಯಗೊಂಡವರು. ಇವರನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೋರನಹಳ್ಳಿ ಗ್ರಾಮದಿಂದ ಕಲಬುರಗಿ ಕಡೆಗೆ ಬೈಕ್ ಮೇಲೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಶಾಸಕ
ಅಪಘಾತದಲ್ಲಿ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ಸೇರಿಸುವುದರ ಮೂಲಕ ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಜೇವರ್ಗಿ ಶಾಸಕ ಡಾ.ಅಜಯಸಿಂಗ್ ಅವರು ಮಾನವೀಯತೆ ಮೆರೆದಿದ್ದಾರೆ.
ಶಾಸಕ ಡಾ.ಅಜಯಸಿಂಗ್ ಅವರು ಕಾರ್ಯಕ್ರಮ ನಿಮಿತ್ತ ಇಂದು ಬೆಳಿಗ್ಗೆ ಕಲಬುರಗಿಯಿಂದ ಜೇವರ್ಗಿ ಕಡೆಗೆ ಹೋರಟಿದ್ದರು. ಈ ವೇಳೆ ನಗರ ಹೊರವಲಯದ ಕೇಂದ್ರ ಕಾರಾಗೃಹ ಸಮೀಪದ ಸಿನ್ನೂರ ಹತ್ತಿರ ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದನ್ನು ಗಮನಿಸಿ ಅವರನ್ನು ತಕ್ಷಣವೇ ಅಂಬ್ಯುಲೆನ್ಸ್‍ನಲ್ಲಿ ಆಸ್ಪತ್ರೆಗೆ ಸೇರಿಸಲು ನೆರವಾದರು.
ಜೊತೆಗೆ ಜೇವರ್ಗಿ ಕಾರ್ಯಕ್ರಮಕ್ಕೆ ಹೋಗುವುದನ್ನು ಮೊಟಕುಗೊಳಿಸಿ ಯುವಕರನ್ನು ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು. ತದನಂತರ ಶಾಸಕರು ಮರಳಿ ಜೇವರ್ಗಿಗೆ ತೆರಳಿದರು. ಶಾಸಕರ ಈ ಮಾನವೀಯ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.