ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 2 ಲಕ್ಷ ರೂ. ಖದೀಮರ ಪಾಲು

ನಂಜನಗೂಡು, ನ.18: ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ 2 ಲಕ್ಷ ರೂ.ಗಳನ್ನು ಹೊಂಚು ಹಾಕಿ ಖದೀಮರು ಲಪಟಾಯಿಸಿಕೊಂಡು ಪರಾರಿಯಾಗಿರುವ ಘಟನೆ ಪಟ್ಟಣದ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದಿದೆ.
ಕಾಲೇಜಿನ ದೈಹಿಕ ಉಪನ್ಯಾಸಕ ವೀರಭದ್ರಯ್ಯ ಹಣ ಕೆಳೆದುಕೊಂಡ ದುರ್ದೈವಿ. ಇವರು ಮಂಗಳವಾರ ಪಾಠಶಾಲಾ ಬೀದಿಯ ಎಸ್‍ಬಿಐ ಶಾಖೆಯ ತಮ್ಮ ಬ್ಯಾಂಕ್ ಖಾತೆಯಿಂದ ಎರಡು ಲಕ್ಷ ರೂ. ಡ್ರಾ ಮಾಡಿಕೊಂಡು ತಮ್ಮ ಸ್ಕೂಟರಿನ ಡಿಕ್ಕಿಯಲ್ಲಿ ಇಟ್ಟುಕೊಂಡು ಕಾಲೇಜಿಗೆ ನೇರ ಆಗಮಿಸಿದ್ದಾರೆ. ಬಂದ ಅವರು ಕಾಲೇಜಿನ ಆವರಣದಲ್ಲಿ ಸ್ಕೂಟರ್ ನಿಲ್ಲಿಸಿ ಕಾಲೇಜಿನ ಒಳಗಡೆ ಹೋಗಿದ್ದಾರೆ.
ಇದೇ ಸಮಯವನ್ನು ನೋಡಿ ಹೊಂಚು ಹಾಕಿದ ಖದೀಮರು ಸ್ಕೂಟರಿನ ಡಿಕ್ಕಿ ಹೊಡೆದು ಎರಡು ಲಕ್ಷ ರೂ. ಕಸಿದುಕೊಂಡು ಪರಾರಿಯಾಗಿದ್ದಾರೆ. ವೀರಭದ್ರಯ್ಯ ಮನೆಗೆ ಹೋಗಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಸರ್ಕಲ್ ಇನ್ಸ್‍ಪೆಕ್ಟರ್ ಲಕ್ಷ್ಮಿಕಾಂತ ತಳವಾರ್, ಪಿಎಸ್‍ಐ ರವಿಕುಮಾರ ಸ್ಥಳಕ್ಕಾಗಮಿಸಿ ತಪಾಸಣೆ ನಡೆಸಿದರು. ಘಟನೆ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಸೆರೆಗೆ ಬಲೆ ಬೀಸಲಾಗಿದೆ.