ಸ್ಕೂಟರ್‌ಗೆ ಢಿಕ್ಕಿ ಹೊಡೆದ ಟಿಪ್ಪರ್ : ಸವಾರ ಮೃತ್ಯು


ಮೂಡುಬಿದಿರೆ,ಏ.೨- ಸ್ಕೂಟರ್‌ಗೆ ಟಿಪ್ಪರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟರ್ ಸವಾರ ಮೃತಪಟ್ಟು ಸಹ ಸವಾರ ಗಾಯಗೊಂಡ ಘಟನೆ ಬೆಳುವಾಯಿಯ ಕೆಸರ್‌ಗದ್ದೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಯುವಕ ಸಂತೋಷ್(೨೮)ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ. ಹಿಂಬದಿ ಸವಾರ ದಿನೇಶ್(೩೫)ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಬ್ಬರು ಸುಭಾಸ್‌ನಗರದ ನಿವಾಸಿಗಳು. ಬುಧವಾರ ರಾತ್ರಿ ಬೆಳುವಾಯಿಯಲ್ಲಿ ಕೋಲ ನೋಡುವುದಕ್ಕೆಂದು ಕೂಲಿ ಕಾರ್ಮಿಕರಾಗಿರುವ ಸಂತೋಷ್ ಮತ್ತು ದಿನೇಶ್ ಸ್ಕೂಟರ್‌ನಲ್ಲಿ ಸುಭಾಸ್‌ನಗರದಿಂದ ಹೊರಟಿದ್ದರು. ಕೆಸರ್‌ಗದ್ದೆ ತಲುಪುವಾಗ ಮೂಡುಬಿದಿರೆ ಕಡೆ ಬರುತ್ತಿದ್ದ ಟಿಪ್ಪರ್ ಸ್ಕೂಟರ್‌ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಅಪಘಾತದ ತೀವ್ರತೆಗೆ ಸಂತೋಷ್‌ಅವರ ತಲೆ ಹಾಗೂ ಎದೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿರುತ್ತಾರೆ. ಘಟನೆ ಬಳಿಕ ಟಿಪ್ಪರ್ ಚಾಲಕ ತನ್ನ ವಾಹನದೊಂದಿಗೆ ಪರಾರಿಯಾಗಿದ್ದಾರೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.