ಸ್ಕಿಜೋಫ್ರೀನಿಯಾ  ನಿವಾರಣೆಗೆ ಕೌನ್ಸಿಲಿಂಗ್ ಜತೆಗೆ ಚಿಕಿತ್ಸೆ ಕೊಡಿಸುವುದು ಅತಿ ಅವಶ್ಯಕ.

ದಾವಣಗೆರೆ.ಜೂ.೨; ಸ್ಕಿಜೋಫ್ರೀನಿಯಾ ಕಾಯಿಲೆ ನಿವಾರಣೆಗೆ ಕೌನ್ಸಿಲಿಂಗ್ ಜತೆಗೆ ಚಿಕಿತ್ಸೆ ಕೊಡಿಸುವುದು ಅತಿ ಅವಶ್ಯಕ. ಇದನ್ನು ನಿರ್ಲಕ್ಷಿಸಿದರೆ ಕಾಯಿಲೆ ತೀವ್ರ ಸ್ವರೂಪವಾಗಲಿದೆ ಎಂದು ಎಸ್‌ಎಸ್ ವೈದ್ಯಕೀಯ ಕಾಲೇಜಿನ ಮನೋವೈದ್ಯ ಡಾ. ಮೃತ್ಯುಂಜಯ ಹೇಳಿದರು. ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಭಾರತೀಯ ಕಲಾ ಸಾಂಸ್ಕೃತಿಕ ಅಕಾಡೆಮಿ ಸಹಯೋಗದಲ್ಲಿ ಇಲ್ಲಿನ ಮಾನಸಧಾರ- ಸಮುದಾಯ ಮಾನಸಿಕ ಆರೋಗ್ಯ ಕೇಂದ್ರದಲ್ಲಿ  ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರೀನಿಯಾ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ಕಿಜೋಫ್ರೀನಿಯಾ ಕಾಯಿಲೆಪೀಡಿತ ಜಿಲ್ಲೆಯ ಉಪನ್ಯಾಸಕರೊಬ್ಬರು ಕಾರಣಾಂತರದಿಂದ ನಿಯಮಿತವಾಗಿ ಔಷಧ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಾಯಿಲೆಯ ಮೊದಲಿನ ತೀವ್ರ ಥರ ಲಕ್ಷಣಗಳು ಕಂಡುಬಂದವು. ಹೀಗಾಗಿ ಚಿಕಿತ್ಸೆ ನೀಡುವುದು ವರ್ಷಾನುಗಟ್ಟಲೆ ತಡ ಆಗಬಹುದು. ಆದರೆ ಪಾಲಕರಲ್ಲಿ ತಾಳ್ಮೆ ಅಗತ್ಯವಿದೆ ಎಂದರು. ಕೆಲವು ಮಾನಸಿಕ ಕಾಯಿಲೆಗೆ ಮನೋವೈದ್ಯರು ನಿದ್ರೆ ಮಾತ್ರೆ ನೀಡುವುದು ಸಹಜ. ಕೆಲವರ ಮಿದುಳನ್ನು ಶಾಂತಸ್ಥಿತಿಗೆ ತರಲು ನಿದ್ರೆ ಮಾತ್ರೆ ಕೆಲಸ ಮಾಡಲಿದೆ. ಕೆಲವರು ರಾತ್ರೋರಾತ್ರಿ ಓಡಾಡುತ್ತಾರೆ. ಕಲ್ಲಿನಿಂದ ಹೊಡೆಯುತ್ತಿರುತ್ತಾರೆ. ಇಂಥವರನ್ನು ಹತೋಟಿಗೆ ತರಲು ನಿದ್ರೆ ಮಾತ್ರೆ ಬಳಸಲಾಗುತ್ತದೆ ಎಂದು ಸಮರ್ಥಿಸಿಕೊಂಡರು. ಯಾರೋ ನನ್ನನ್ನು ಗಮನಿಸುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ ಎಂಬ ಶಂಕೆ ಸ್ಕಿಜೋಫ್ರೀನಿಯಾ ರೋಗಿಗಳಲ್ಲಿ ಇರುತ್ತದೆ. 25-35 ರ ವಯೋಮಾನದಲ್ಲಿ ಇದು ಕಂಡುಬರಲಿದೆ. ಶೇ.15ರಷ್ಟು ಜನರಲ್ಲಿ ಅನುವಂಶೀಯವಾಗಿ ಬರಲಿದೆ. ಖಿನ್ನತೆಯಲ್ಲಿರುವ ಈ ಕಾಯಿಲೆಪೀಡಿತರು ದೈನಂದಿನ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ ಎಂದರು. 1950 ರಿಂದೀಚೆಗೆ ಮಾನಸಿಕ ಕಾಯಿಲೆಗೆ ಚಿಕಿತ್ಸೆಗಳು ಬಂದಿವೆ. ಶೇ.70-75ರಷ್ಟು ಮಾನಸಿಕ ರೋಗಿಗಳು ಗುಣಮುಖರಾಗಿ ಸಹಜ ಜೀವನ ನಡೆಸುತ್ತಿದ್ದಾರೆ. ನಮ್ಮ ಮನಸ್ಸು ಸದೃಢವಾಗಿದ್ದಲ್ಲಿ ಸ್ಕಿಜೋಫ್ರೀನಿಯಾವಲ್ಲದೆ ಯಾವುದೇ ಕಾಯಿಲೆಯನ್ನೂ ದೂರ ಮಾಡಬಹುದು ಎಂದು ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾಲಿಕೆ ಸದಸ್ಯ ಎಸ್.ಟಿ.ವೀರೇಶ್ ಮನೋರೋಗಿಗಳ ಸೇವೆ ಮಾಡುವ ಮಾನಸಧಾರ ಕೇಂದ್ರದ ಸಿಬ್ಬಂದಿ ಕೆಲಸ ಉಳಿದೆಲ್ಲ ವೃತ್ತಿಗಿಂತಲೂ ಪುಣ್ಯವಾದುದು. ಮಾನಸಿಕ ರೋಗಿಗಳಿಗೆ ಜಿಲ್ಲೆಯಲ್ಲೇ ಏಕೈಕ ಚಿಕಿತ್ಸಾ  ಕೇಂದ್ರಕ್ಕೆ ನಗರಪಾಲಿಕೆ ಮತ್ತು ಇತರೆ ವಿಧದ ನೆರವು ಕಲ್ಪಿಸಲಾಗುವದು ಎಂದು ಭರವಸೆ ನೀಡಿದರು.