ಸ್ಕಿಜೋಪ್ರೀನಿಯ ಬಗ್ಗೆ ಆರಂಭದಲ್ಲಿಯೇ ಚಿಕಿತ್ಸೆ ಅಗತ್ಯ

ಚಾಮರಾಜನಗರ, ಮೇ.31:- ಸ್ಕಿಜೋಫ್ರೀನಿಯ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ ಸೂಕ್ತ ಚಿಕಿತ್ಸೆಯನ್ನು ಆರಂಭದಲ್ಲಿಯೇ ನೀಡಬೇಕೆಂದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಕಾಧಿಕಾರಿ ಎಸ್. ಪೂವಿತಾ ಅವರು ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ವಿಶ್ವ ಸ್ಕಿಜೋಫ್ರೀನಿಯ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡುವ ಸ್ಕಿಜೋಫ್ರೀನಿಯ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಒತ್ತಡಜೀವನದಿಂದ ಮಾನಸಿಕ ಖಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆಗಳು ಇವೆ. ಈ ನಿಟ್ಟಿನಲ್ಲಿ ಈ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದರು.
ಆರೋಗ್ಯ ಸಿಬ್ಬಂದಿಗಳು, ಆಶಾಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಕಿಜೋಪ್ರೀನಿಯ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು. ರೋಗದ ಲಕ್ಷಣ ಹಾಗೂ ಅಗತ್ಯ ಔಷಧಗಳ ಬಗ್ಗೆ ಗಮನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯ ನಿರ್ವಹಕಾಧಿಕಾರಿ ಎಸ್. ಪೂವಿತಾ ಅವರು ತಿಳಿಸಿದರು.
ಆರೋಗ್ಯಇಲಾಖೆಯ ಮಾನಸಿಕ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್‍ಅವರು ಮಾತನಾಡಿ ಸ್ಕಿಜೋಫ್ರೀನಿಯ ಬಗ್ಗೆ ಎಲ್ಲರಿಗೂ ಅರಿವು ಅಗತ್ಯವಾಗಿದೆ. ರೋಗ ಲಕ್ಷಣ ಇರುವವರಲ್ಲಿ ತೊಂದರೆ ನಿವಾರಿಸಿ ಮುಖ್ಯ ವಾಹಿನಿಗೆ ತರುವಲ್ಲಿ ಪ್ರಯತ್ನಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ಮತ್ತು ಶುಕ್ರವಾರದಂದು ಮನೋರೋಗ ಸಂಬಂಧಿ ಚಿಕಿತ್ಸೆಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಶ್ರೀಧರ ಅವರು ಮಾತನಾಡಿ ದಿನಾಚರಣೆಗಳು ಕೇವಲ ಒಂದೇ ದಿನಗಳಿಗೆ ಸೀಮಿತವಾಗಬಾರದು. ದಿನಾಚರಣೆಯ ಉದ್ದೇಶ ಮತ್ತುಅದರ ಹಿನ್ನೆಲೆ ತಿಳಿದುಕೊಳ್ಳಬೇಕು. ಮಾನಸಿಕ ಖಿನ್ನತೆ ಮತ್ತು ತೊಂದರೆ ಅನುಭವಿಸುವವರ ಬಗ್ಗೆ ಅಗತ್ಯ ಕ್ರಮವಹಿಸಬೇಕು. ಸ್ಕಿಜೋಫ್ರೀನಿಯ ಕಾಯಿಲೆಯನ್ನು ಮೊದಲನೇ ಹಾಗೂ ಎರಡನೇ ಹಂತದಲ್ಲಿಯೇ ಗುರುತಿಸಿ ಅಗತ್ಯ ಚಿಕಿತ್ಸೆ ನೀಡಬೇಕಿದೆ ಎಂದರು.
ಮೆಂಟಲ್ ಹೆಲ್ತ್‍ಆಕ್ಟ್ ಮೂಲಕ ಮಾನಸಿಕ ರೋಗಿಗಳಿಗೆ ಎಲ್ಲಾ ರೀತಿಯ ಕಾನೂನಾತ್ಮಕ ಸಲಹೆ, ಸೂಚನೆ, ಸಹಾಯಗಳನ್ನು ನೀಡಲಾಗುವುದು. ಸಮಾಜದಲ್ಲಿ ಮಾನಸಿಕ ರೋಗಿಗಳನ್ನು ಕಳಂಕಿತರಾಗಿ ನೋಡಬಾರದು ಎಂದು ನ್ಯಾಯಾಧೀಶರಾದ ಎಂ. ಶ್ರೀಧರ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ ವಿಶ್ವೇಶ್ವರಯ್ಯ ಅವರು ಸ್ಕಿಜೋಫ್ರೀನಿಯ ಕಾಯಿಲೆಯ ಬಗ್ಗೆ ಈಗಾಗಲೇ ತಾಲೂಕುವಾರು ಅರಿವು ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿಗ್ರಾಮ ಮತ್ತು ಹಾಡಿಗಳಲ್ಲಿ ಎಚ್ಚರ ವಹಿಸುವಂತೆ ತಿಳಿಸಲಾಗಿದೆ ಎಂದರು.
ಸಿಮ್ಸ್ ಆಸ್ಪತ್ರೆಯ ಮನೋರೋಗತಜ್ಞರಾದ ಡಾ. ರಾಜೇಶ್, ಮೇರಿ ಹಾಗೂ ಡಾ. ಅಂಕಪ್ಪ, ಡಾ. ನಾಗರಾಜು, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.