ಸ್ಕಾಲರ್ಶಿಪ್ ಬಿಡುಗಡೆಗೆ ಡಿ.ಎಸ್.ಎಸ್ ಆಗ್ರಹ

ಬಳ್ಳಾರಿ, ಜ.05: ಕಳೆದ ಮೂರು ವರ್ಷಗಳಿಂದ ತಡೆ ಹಿಡಿದಿರುವ ಸ್ಕಾಲರ್ಶಿಪ್ ನ್ನು ಪಾವತಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಲಕ್ಷ್ಮಿ ನಾರಾಯಣ ನಾಗವಾರ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ನಿನ್ನೆ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, 1944 ರಿಂದ ರಾಜ್ಯದಲ್ಲಿ ಪರಿಶಿಷ್ಟ ಜಾತಿ, ಪಂಗಡದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಜಾರಿಗೆ ಬಂದಿದೆ. ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚು ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಇದರ ಲಾಭ ದೊರಕುತ್ತಿತ್ತು. ಇದಕ್ಕಾಗಿ 2017-18ರಲ್ಲಿ 3.414 ಕೋಟಿ ರೂ ಮೀಸಲಿಟ್ಟಿದ್ದರೆ, 2019-20ನೇ ಸಾಲಿನಲ್ಲಿ 2.927 ಕೋಟಿ ರೂಗೆ ಕೇಂದ್ರ ಸರ್ಕಾರ ಖಡಿತಗೊಳಿಸಿದೆ.
ಒಂದು ಕಡೆ ಮೋದಿ ಸರ್ಕಾರ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಹಣವನ್ನು ಖಡಿತಗೊಳಿಸುತ್ತ ಮತ್ತೊಂದು ಕಡೆ ಸಿ.ಬಿ.ಎಸ್.ಸಿ ಆಡಳಿತ ಮಂಡಳಿ ಬೋಧನಾ ಶುಲ್ಕವನ್ನು 50 ರಿಂದ 1200 ರೂಗಳಿಗೆ ಹೆಚ್ಚಿಸಿದೆ. ಹೀಗಾಗಿ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ಪೋಷಕರಿಗೆ ಕಷ್ಟವಾಗುತ್ತಿದೆ.
ಮುಂದಿನ ಐದು ವರ್ಷಗಳಿಗೆ 59.048 ಕೋಟಿ ರೂ ಮೊತ್ತವನ್ನು ಕೇಂದ್ರ ಸರ್ಕಾರ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಮೀಸಲಿಡುವುದಾಗಿ ಹೇಳಿದೆ. ಆದರೆ ಬಿಡುಗಡೆ ಮಾಡದಿದ್ದರೆ ರಾಜ್ಯ ಸರ್ಕಾರವೂ ನೀಡುವುದಿಲ್ಲ. ಹೀಗಾಗಿ ಇದರ ಲಾಭ ಪಡೆಯಬೇಕಾದ 67 ಲಕ್ಷ ವಿದ್ಯಾರ್ಥಿಗಳು ಪ್ರತಿ ವರ್ಷ ಪಡೆಯಬಹುದಾದ 11.809 ರೂ ಸ್ಕಾಲರ್ಶಿಪ್ ನಿಂದ ವಂಚಿತರಾಗಬೇಕಾಗುತ್ತದೆ. ಇದು ಕಡಿಮೆ ಮೊತ್ತವೂ ಆಗಿದೆ. ಅದಕ್ಕಾಗಿ ಬಾಕಿ ಸ್ಕಾಲರ್ಶಿಪ್ ಬಿಡುಗಡೆ ಮಾಡಿ ಹೊಸದನ್ನು ಹೆಚ್ಚಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಂಚಾಲಕ ಕೆ.ವೆಂಕಟೇಶ್ ಮೂರ್ತಿ, ಹೆಚ್.ರಮೇಶ್, ಮೊದಲಾದವರು ಇದ್ದರು.