ಸೌಹಾರ್ದ ಯುಗಾದಿ ಕಾರ್ಯಕ್ರಮ

ಕಲಬುರಗಿ:ಮಾ.24: ಯುಗಾದಿ ಹಬ್ಬದ ಪ್ರಯುಕ್ತ ಸೌಹಾರ್ದ ಕನಾರ್ಟಕ ಸಂಘಟನೆಯು ನಗರದ ಜಗತ್ ವೃತ್ತದ ಬಸವೇಶ್ವರ ಉದ್ಯಾನವನದಲ್ಲಿ ಸೌಹಾರ್ದ ಯುಗಾದಿ ಕಾರ್ಯಕ್ರಮ ಆಚರಿಸಲಾಯಿತು.

ಸಂಗಯ್ಯ ಹಳ್ಳದ ಮಠ ಅವರು ಸಾಮರಸ್ಯ ಗೀತೆ ಹಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಅಧ್ಯಕ್ಷೆ ಡಾ ಮೀನಾಕ್ಷಿ ಬಾಳಿಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತ ಯುಗಾದಿಯು ಉತ್ತರ ಕರ್ನಾಟಕದಲ್ಲಿ ಬಹು ದೊಡ್ಡ ಹಬ್ಬವಾಗಿದೆ. ರೈತರ, ಕೃಷಿ ಕೂಲಿ ಕಾರ್ಮಿಕರ ಇಡೀ ವರ್ಷದ ಚಟುವಟಿಕೆಗಳಿಗೆ ಮುನ್ನುಡಿ ಬರೆಯುವ ಈ ಹಬ್ಬವು ಬರಲಿರುವ ದಿನಗಳಲ್ಲಿ ಎದುರಾಗುವ ಕಷ್ಟ,ಸುಖಃಗಳನ್ನು ಸಮತೂಗಿಸಿ ಕೊಂಡು ಹೋಗುವ ಧಾರಣ ಶಕ್ತಿ ಬೆಳೆಸುತ್ತದೆ. ಆದ್ದರಿಂದಲೆ ಇಂದು ನಮ್ಮ ಭಾಗದಲ್ಲಿ ಸಿಹಿ-ಕಹಿ ಎರಡನ್ನು ಅಂದರೆ ಬೇವಿನ ಹೂ ಮತ್ತು ಬೆಲ್ಲ ಎರಡನ್ನು ಸೇರಿಸಿ ವಿಶೇಷವಾದ ಪಾನಕ, ಅದುವೆ ಬೇವು ತಯಾರಿಸಿ ಎಲ್ಲರೂ ಕುಡಿಯುತ್ತಾರೆ ಆದ್ದರಿಂದ ಇದು ಸಮರಸದ ಹಬ್ಬ. ಕೂಡಿ ಬಾಳುವುದನ್ನು ಕಲಿಸುವ ಹಬ್ಬ ಎಂದು ಹೇಳಿದರು. ನಂತರ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತ,ಲಿಂಗಾಯತ ಮುಂತಾಗಿ ಎಲ್ಲ ಬಾಂಧವರು ಪರಸ್ಪರ ಬೇವು ಬೇವು ಕುಡಿಸಿ ಅಭಿನಂದಿಸಿದರು. ಬೇವು ಸ್ವೀಕರಿಸಿದೊಡನೆ ಸಮುದಾಯ ಸಂಘಟನೆಯ ಅಧ್ಯಕ್ಷರಾದ ಪೆÇ್ರೀ ಶ್ರಿಶೈಲ ಘೂಳಿಯವರು ಯುಗದ ಆದಿ ಅಂದರೆ ರೈತಾಪಿ ಜನಾಂಗದವರು ಮಾನ್ಸೂನ ಅವಲಂಬಿಸಿ ಬಿತ್ತುಣಕಿಯು ಮಾಡುತ್ತಾರೆ. ಆದ್ದರಿಂದ ಇದು ವರ್ಷದ ಪ್ರಾರಂಭ. ಈ ದಿನವನ್ನು ನಾವು ಹಳ್ಳಿಗಳಲ್ಲಿ ಅತ್ಯಂತ ಸಂಭ್ರಮದಿಂದ ಮತ್ತು ಎಲ್ಲ ಬಾಂಧವರೊಂದಿಗೆ ಸೇರಿ ಆಚರಿಸುತ್ತೇವೆ. ಎಂದು ಹೇಳಿದರು.

ನಂತರ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಚಿತ್ರ ಕಲಾವಿದ ಅಯಾಜೊದ್ದೀನ್ ಪಟೇಲ ಮಾತನಾಡಿ ಗ್ರಾಮಗಳಲ್ಲಿ ಈ ಹಬ್ಬವನ್ನು ಪ್ರತಿಯೊಬ್ಬರೂ ಆಚರಿಸುತ್ತಿದ್ದು ತಮ್ಮ ತಾಯಿ ಊರಿನ ಎಲ್ಲ ದೇವರಿಗೂ ನೈವೇದ್ಯ ಕೊಡುತಿದ್ದದ್ದು, ಬೇವು ತಯಾರಿಸಿ ಓಣಿಗೆಲ್ಲ ಹಂಚುತಿದ್ದರು ಎಂದು ನೆನಪಿಸಿಕೊಂಡರು. ನಂತರ ಅಂಜುಮನ್ ತರಖ್ಖಿ ಸಂಸ್ಥೆಯ ಅನ್ನೀಸ್ ಸಿದ್ಧಿಕಿಯವರು ಎಲ್ಲರಿಗೂ ಶುಭಾಶಯ ಕೋರಿ ಪರಸ್ಪರ ಕೂಡಿ ಬಾಳುವ ಸಂದೇಶ ನೀಡುವುದೇ ಎಲ್ಲ ಹಬ್ಬಗಳ ಉದ್ದೇಶ ಎಂದು ಹೇಳಿದರು.

ತದನಂತರ ಕಲ್ಯಾಣ ಕರ್ನಾಟಕ ಸರಕಾರಿ ಪದವಿ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ ಶರಣಪ್ಪ ಸೈದಾಪೂರ ಅವರು ಮಾತನಾಡುತ್ತ ಭಾರತದ ಸಂವಿಧಾನವು ಎಲ್ಲರಿಗೂ ತಮ್ಮ ಸಮಾನ ಸಾಂಸ್ಕøತಿಕ ಹಕ್ಕುಗಳನ್ನು ನೀಡಿದೆ. ಇನ್ನೊಬ್ಬರ ಸಂಸ್ಕ್ರತಿಯ ನ್ನು ಅಪಮಾನಿಸುವುದು ಧರ್ಮವಲ್ಲ. ಕೂಡಿ ಬಾಳುವಲ್ಲಿ ಇರುವ ನೆಮ್ಮದಿ,ಸುಖ ದ್ವೇಷ, ಅಸೂಯೆಗಳಲ್ಲಿ ಇಲ್ಲ ಎಂದರು.

ಬೀಬೀ ರಜಾ ಕಾಲೇಜಿನ ಪ್ರಾಚಾರ್ಯರಾದ ಡಾ.ಜೇಬಾ ಪರವಿನ್ ಅವರು ಎಲ್ಲರಿಗೂ ಸಿಹಿ ವಿತರಿಸಿ ಹಬ್ಬಗಳಿಗೆ ಜಾತಿ,ಮತ,ಭಾಷೆ ಎಂಬ ಗಡಿಗಳಿಲ್ಲ. ನಲಿದು, ಕುಣಿದು, ಪರಸ್ಪರ ಆನಂದ ಹಂಚಿಕೊಳ್ಳಲೆಂದೆ ಹಿರಿಯರು ಹಬ್ಬಗಳನ್ನು ಸೃಷ್ಟಿ ಸಿದ್ದಾರೆ ಎಂದರು.

ಕೊನೆಯದಾಗಿ ಶರಣೆ ಪ್ರಭುಶ್ರೀ ಯವರು ಮಾತನಾಡಿ ಯುಗಾದಿ ದಿನದಂದೇ ಅಲ್ಲಮಪ್ರಭುವಿನ ಜಯಂತಿಯು ಇದೆ. ಇದೊಂದು ಸುವರ್ಣ ಅವಕಾಶ. ವಿಶ್ವದ ಶ್ರೇಷ್ಠ ದಾರ್ಶನಿಕರಲ್ಲೊಬ್ಬರಾದ ಅಲ್ಲಮ- ಅಲ್ಲಾ ಎರಡೂ ಆತ್ಯಂತಿಕ ನಿಲುವುಗಳು. ಸಕಲ ಜೀವಾತ್ಮರಿಗೆ ಲೇಸು ಬಯಸುವುದನ್ನು ರೂಢಿಸಿಕೊಳ್ಳಬೇಕು. ಅನ್ಯ ಧರ್ಮೀಯರನ್ನು ದ್ವೇಷಿಸುವುದು ಶರಣ ಧರ್ಮ ಅಲ್ಲ ಎಂದು ವಿವರಿಸಿದರು.

ಸಮುದಾಯದ ಅಶೋಕ ಶಟಗಾರ, ಪ್ರೇಮಾನಂದ, ಜನವಾದಿಯ ಲವಿತ್ರ, ಚಂದಮ್ಮ, ಲೀಲಾ ಬಾಣಿ, ಈರಮ್ಮ ಬಂಗಾರ ಕಿಣಗಿ. ಉಪನ್ಯಾಸಕರಾದ ಡಾ ಕನಿಜ್ ಫಾತಿಮಾ, ಜರಿನಾ ನಾಹೇದ, ಶಿವಲೀಲಾ ಧೋತ್ರೆ, ಗೌಸುದ್ದೀನ್ ತುಮಕೂರಕರ್, ಡಾ ಪ್ರಭು ಖಾನಾಪೂರೆ, ಭೀಮಾಶಂಕರ ಮಾಡ್ಯಾಳ, ಇಕ್ಬಾಲ್ ಪಟೇಲ, ಸಂಜಯ ಮಾಕಲ್, ಸುಧಾಮ ದನ್ನಿ, ಶ್ರೀಮಂತ ಬಿರಾದಾರ, ಡಿಡಿಪಿಯು ಶಿವಶರಣ ಮುಳೆಗಾಂವ.ಜನವಾದಿಯ ರಾಜ್ಯ ಉಪಾಧ್ಯಕ್ಷರಾದ ಕೆ ನೀಲಾ ಮುಂತಾದವರು ಶುಭಾಶಯಗಳನ್ನು ಕೋರಿದರು. ಕೊನೆಯದಾಗಿ ನಾಗೇಂದ್ರಪ್ಪ ಅವರಾದಿ ವಂದನಾರ್ಪಣೆ ಮಾಡಿದರು. ಲವಿತ್ರ ಮತ್ತು ತಂಡದವರಿಂದ ಕ್ರಾಂತಿ ಗೀತೆಗಳು ನಡೆದವು.