ಸೌಹಾರ್ದತೆಯಿಂದ ಉತ್ತಮ ಸಮಾಜ ನಿರ್ಮಾಣ

ಕೋಲಾರ,ಮಾ,೨೫- ಸೌಹಾರ್ದತೆಯಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ತಿಳಿಸಿದರು.
ನಗರದ ಆರ್‌ಟಿಒ ಕಚೇರಿಯಲ್ಲಿ ಮಂಗಳವಾರ ತ್ರಿಚಕ್ರ ವಾಹನ ಚಾಲಕರ ಸಂಘ ಮತ್ತು ಆರ್‌ಟಿಒ ಕಚೇರಿಯಿಂದ ಆಯೋಜಿಸಲಾಗಿದ್ದ ಶ್ರಮಿಕ ಸೌಹಾರ್ದ ಯುಗಾದಿ ಉದ್ಘಾಟಿಸಿ, ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವ ಬೃಹತ್ ಎಲ್‌ಇಡಿ ಪರದೆ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಂವಿಧಾನವು ದೇಶದ ಪ್ರತಿಯೊಬ್ಬರಿಗೂ ಸಮಾನವಾದ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನೀಡಿದೆ, ಜಾತಿ ಬೇಧ ಮಾಡದೆ ಸೌಹಾರ್ದತೆಯಿಂದ ಭಾರತೀಯರೆಲ್ಲರೂ ಒಂದೇಎಂದು ಜೀವನ ಸಾಗಿಸಬೇಕೆಂದು ಸಲಹೆ ನೀಡಿ, ಸೌಹಾರ್ದ ಯುಗಾದಿ ಮತ್ತು ರಂಜಾನ್ ಅಚರಿಸುತ್ತಿರುವರೆಲ್ಲರಿಗೂ ಶುಭಾಶಯ ಕೋರಿದರು.
ವಾಹನ ಚಲಾಯಿಸುವವರು ಕಡ್ಡಾಯವಾಗಿ ವಾಹನ ಚಾಲನಾ ಪ್ರಮಾಣ ಪತ್ರ, ವಾಹನ ನೋಂದಣಿ ದಾಖಲೆ, ಪರಿಸರ ಮಾಲಿನ್ಯ ಪ್ರಮಾಣ ಪತ್ರ ಹಾಗೂ ವಿಮೆಯ ಪತ್ರಗಳನ್ನು ಹೊಂದಿರಬೇಕು ಇದಿಲ್ಲದೆ ವಾಹನ ಚಲಾಯಿಸಿದರೆ ದಂಡ ಪಾವತಿಸಲು ಸಿದ್ಧವಾಗಿರಬೇಕೆಂದು ಎಚ್ಚರಿಸಿದರು.
ಹುಟ್ಟುವ ಮುಂಚಿತವಾಗಿನಿಂದ ಹಿಡಿದು ಸಾಯುವ ತನಕ ಕಾನೂನುಗಳನ್ನು ತನ್ನದೇ ಪಾತ್ರವನ್ನುವಹಿಸುತ್ತವೆ, ಅಶಕ್ತರು, ಆರ್ಥಿಕವಾಗಿ ಹಿಂದುಳಿದವರು, ದಲಿತರು, ಮಹಿಳೆಯರಿಗೆ ನ್ಯಾಯಾಂಗ ಇಲಾಖೆಯು ಕಾನೂನುಸೇವಾ ಪ್ರಾಽಕಾರದಿಂದ ಉಚಿತವಾಗಿ ಕಾನೂನು ನೆರವು ಅರಿವು ಮೂಡಿಸುತ್ತದೆ ಎಂದರು.
ವಾಹನ ದಾಖಲೆಗಳನ್ನು ಕಾಲ ಕಾಲಕ್ಕೆ ನವೀಕರಣ ಮಾಡಿಕೊಳ್ಳಬೇಕು, ಸುರಕ್ಷತೆಯಿಂದ ವಾಹನ ಚಲಾಯಿಸಬೇಕು, ಮಕ್ಕಳಿಗೆ ೧೮ ತುಂಬಿ ಚಾಲನಾ ಪರವಾನಗಿ ಮಾಡಿಸುವವರೆವಿಗೂ ವಾಹನಚಲಾಯಿಸು ಬಿಡಬಾರದು, ವೀಲಿಂಗ್ ಮಾಡುವುದನ್ನು ತಡೆಗಟ್ಟಬೇಕು, ಮದ್ಯಪಾನ ತಂಬಾಕು ಸೇವಿಸಿ ವಾಹನ ಚಲಾಯಿಸಬಾರದು ಎಂಬಿತ್ಯಾದಿ ಸಲಹೆಗಳನ್ನು ನೀಡಿದರು.
ಅಧ್ಯಕ್ಷತೆವಹಿಸಿದ್ದ ಆರ್‌ಟಿಓ ಎ.ಬಿ.ಯೋಮಕೇಶಪ್ಪ ಮಾತನಾಡಿ, ವಾಯು ಮಾಲಿನ್ಯ ಇಲ್ಲದಂತೆ, ರಸ್ತೆ ಸುರಕ್ಷಣಾ ನಿಯಮಗಳನ್ನು ಪಾಲಿಸಿ ವಾಹನ ಚಲಾಯಿಬೇಕು, ವಾಹನ ಚಾಲಕರ ಮಕ್ಕಳ ಪದವಿ ಪೂರ್ವಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದ್ಯಾಸಿರಿ ಯೋಜನೆ ಮೂಲಕ ವಿದ್ಯಾರ್ಥಿ ವೇತನ ನೀಡುತ್ತಿದ್ದು, ಇದಕ್ಕೆ ನೋಂದಾಯಿಸಿಕೊಂಡು ಸೌಲಭ್ಯಪಡೆದುಕೊಳ್ಳಬೇಕೆಂದರು.
ಕರ್ನಾಟಕ ಅಸಂಘಟಿತ ಕಾರ್ಮಿಕ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ಮಾತನಾಡಿ, ಮೋಟಾರು ವಾಹನ ಕಾಯ್ದೆ ಪರಿಷ್ಕರಣೆ ಆದ ಮೇಲೆ ಡಿಜಿಟಲ್ ಸೇವೆಗಳು ಲಭ್ಯವಿದ್ದು, ಈ ಕುರಿತು ಜಾಗೃತಿ ತಿಳುವಳಿಕೆ ನೀಡಲು ಮತ್ತು ಸೌಹಾರ್ದತೆ ಹರಡಲು ಕಾರ್ಯಕ್ರಮ ಆಯೋಜಿಸಲಾಗಿದೆಯೆಂದು ವಿವರಿಸಿದರು.
ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜಾತಿ ಧರ್ಮಗಳ ನಡುವೆ ಒಡಕನ್ನುಂಟು ಮಾಡುವವರೇ ಹೆಚ್ಚಾಗಿರುವ ಸಮಾಜದಲ್ಲಿ ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುವಂತ ಕಾರ್ಯಕ್ರಮಗಳು ಹೆಚ್ಚಾಗಬೇಕು, ಮೋಟಾರು ಕಾಯ್ದೆ ಕುರಿತು ಪ್ರತಿಯೊಬ್ಬರು ಅರಿತು ವಾಹನ ಚಲಾಯಿಸಬೇಕೆಂದರು.
ಕಾರ್ಯಕ್ರಮದಲ್ಲಿ ಆರ್‌ಟಿಓ ಕಚೇರಿಯ ಶ್ರೀನಿವಾಸ್, ನಿರೀಕ್ಷಕ ಸುಽರ್‌ಬಾಬು, ತ್ರಿಚಕ್ರವಾಹನ ಚಾಲಕರಸಂಘದ ಅಧ್ಯಕ್ಷ ಅಮ್ಜದ್‌ಪಾಷಾ, ಚಾಲಕರ ಸಂಘದ ಕಾರ್ಯದರ್ಶಿ ಜಮೀರ್, ನಾಗರಾಜ ಶೆಣೈ ಮತ್ತಿತರರು ಹಾಜರಿದ್ದರು.
ಕಾರ್ಯಕ್ರಮದ ನಿರ್ವಹಣೆಯನ್ನು ಆರ್‌ಟಿಒ ಕಚೇರಿ ವ್ಯವಸ್ಥಾಪಕ ರಾಜೇಂದ್ರ ಬಂಡಿಗಣಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ವಾಹನ ಚಾಲಕರಿಗೆ ಆರ್‌ಟಿಒ ಕ್ಯಾಲೆಂಡರ್ ವಿತರಿಸಲಾಯಿತು. ನೆರೆದಿದ್ದ ಎಲ್ಲರಿಗೂ ಯುಗಾದಿ ಮುನ್ನಾ ದಿನವೇ ಸೌಹಾರ್ದ ಹೋಳಿಗೆ ಊಟವನ್ನು ಉಣಬಡಿಸಲಾಯಿತು.