ಸೌಲಭ್ಯ ವಂಚಿತ ಬಡವರಿಗೆ ಸರ್ಕಾರದ ಸೌಲಭ್ಯ ಒದಗಿಸುವುದೇ ನಮ್ಮೆಲ್ಲರ ಉದ್ದೇಶ : ಶರಣಬಸಪ್ಪ ದರ್ಶನಾಪುರ

ಯಾದಗಿರಿ : ಡಿ.20: ಸೌಲಭ್ಯ ವಂಚಿತ ಕಡು ಬಡವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸುವುದೇ ನಮ್ಮೆಲ್ಲರ ಮೂಲ ಉದ್ದೇಶವಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಹೇಳಿದರು.

ಜಿಲ್ಲೆಯ ಶಹಾಪುರ ನಗರಸಭೆ ಆವರಣದಲ್ಲಿ ನಗರಸಭೆ ವತಿಯಿಂದ ಹೊಲಿಗೆಯಂತ್ರ, ಬ್ಯುಟಿಯಷನ್ ತರಬೇತಿ ಪ್ರಮಾಣ ಪತ್ರ ಮತ್ತು ಎಸ್.ಸಿ, ಎಸ್.ಟಿ ಸಮುದಾಯದವರಿಗೆ ಲ್ಯಾಪ್ಟಾಪ್ ವಿತರಣೆ, ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ, ಅರೆ ಅಲೆಮಾರಿ ಸಮಾಜದವರಿಗೆ ನಿವೇಶನ ಹಕ್ಕು ಪತ್ರ ವಿತರಣೆ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಸತಿ ರಹಿತ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ನೀಡುವ ಕುರಿತು ಕರೆದಾಗ ಸುಮಾರು 3500 ಅರ್ಜಿಗಳು ಬಂದಿದ್ದು, 22-25 ಎಕರೆ ಪ್ರದೇಶದಲ್ಲಿ ನಿವೇಶನ ನೀಡುವ ಕಾರ್ಯವಾಗಿದೆ. ಕನ್ಯಾಕೋಳೂರು ರಸ್ತೆಯಲ್ಲಿ 200 ಸ್ಲಮ್ ಮನೆಗಳು, ಕುಂಬಾರ ಮತ್ತು ಬುಟ್ ನಾಡಿ ಜನಾಂಗದವರಿಗೆ 2 ಎಕರೆ ಹಾಗೂ ಅಲೆಮಾರಿ ಜನಾಂಗದವರಿಗೆ 2 ಎಕರೆ ಜಮೀನು ಮಂಜೂರು ಸೇರಿದಂತೆ ಹಲವು ಕಾರ್ಯಗಳು ನಡೆದಿವೆ. ಹಳಿಸಗರ ಹತ್ತಿರದ ಮಲ್ಲಯ್ಯನ ದೇವಸ್ಥಾನದ ಹತ್ತಿರ 480 ನಿವೇಶನಕ್ಕೆ ನಗರಸಭೆ ವತಿಯಿಂದ 12 ಎಕರೆ ಜಮೀನು ಗೆ ಅನುಮೋದನೆ ನೀಡಲಾಗಿದ್ದು, ಕುಡಿಯುವ ನೀರು, ಸಿಸಿ ರಸ್ತೆ, ಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ನಡೆದಿದೆ ಎಂದು ಹೇಳಿದರು.

ಅಮೃತ-2 ಯೋಜನೆ ಅಡಿ ನಗರದ ಪರಿಸ್ಥಿತಿ ಅರಿತು 88 ಕೋ.ರೂ.ಗಳ ಹಲವು ಕಾಮಗಾರಿಗಳಿಗೆ ಜನವರಿ ತಿಂಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ನಡೆಯುವುದು, 22 ಕೋಟಿ ವೆಚ್ಚದಲ್ಲಿ ಭೀಮರಾಯನಗುಡಿ, ಹುಲಕಲ್, ಶಖಾಪುರ ಮತ್ತು ಕಂಚಲಕಾಯಿ ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದರು.

ನಗರೋತ್ಥಾನ ಯೋಜನೆಯಡಿ 24 ಕೋಟಿ ರೂ.ವೆಚ್ಚದ ಬೀದಿ ದೀಪಗಳ ಕಾಮಗಾರಿ ಮುಂದಿನ 3 ತಿಂಗಳಲ್ಲಿ ಪ್ರಾರಂಭವಾಗಲಿದೆ. ಹತ್ತಾರು ಯೋಜನೆಯಡಿ ಬರುವ ಅನುದಾನ ಆಯಾ ವರ್ಷದಲ್ಲೇ ಖರ್ಚು ಮಾಡುವ ಕಾರ್ಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾಡಲು ಶ್ರಮಿಸಬೇಕು ಎಂದು ಅವರು ಹೇಳಿದರು.

ವಿವಿಧ ಕಾಲೇಜುಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಹಲವು ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 13 ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ, ಹೊಲಿಗೆಯಂತ್ರ ತರಬೇತಿ ಪಡೆದ 62 ಜನರಿಗೆ ಪ್ರಮಾಣ ಪತ್ರ ವಿತರಿಸಿದರು, ಸರ್ವೇ ನಂ.120ರಲ್ಲಿನ 2 ಎಕರೆ ಜಮೀನಿನಲ್ಲಿ 45 ಜನ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ, ಬ್ಯುಟಿಷಿಯನ್ ತರಬೇತಿ ಪಡೆದ 34 ಜನರಿಗೆ ಪ್ರಮಾಣ ಪತ್ರ ವಿತರಣೆ, 488 ಜನ ಬೀದಿ ಬದಿ ವ್ಯಾಪರಗಳಿಗೆ ಗುರುತಿನ ಚೀಟಿ ಮತ್ತು ಪ್ರಮಾಣ ಪತ್ರ ವಿತರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶ್ರೀಮತಿ ಡಾ. ಸುಶೀಲಾ. ಬಿ, ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ಲಕ್ಷ್ಮಣ, ತಹಸೀಲ್ದಾರರಾದ ಉಮಾಕಾಂತ ಹಳ್ಳಿ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ್, ನಗರಸಭೆ ಪೌರಾಯುಕ್ತರಾದ ರಮೇಶ ಬಡಿಗೇರ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಚನ್ನಪ್ಪಗೌಡ ಚೌದ್ರಿ, ನಗರ ಆಶ್ರಮ ಸಮಿತಿ ಅಧ್ಯಕ್ಷರಾದ ವಸಂತ ಕುಮಾರ ಸುರಪುರಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.