ಸೌಲಭ್ಯ ಪಡೆಯಲು ಬೆಳೆ ಸಮೀಕ್ಷೆ ಸಹಕಾರಿ

ಕುಣಿಗಲ್, ಜು. ೨೩- ತಾಲ್ಲೂಕಿನ ರೈತರು ಬೆಳೆ ಸಮೀಕ್ಷೆ ನಡೆಸುವುದರಿಂದ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ತಾಲ್ಲೂಕು ಕೃಷಿ ನಿರ್ದೇಶಕ ನೂರು ಅಜಾಮ್ ತಿಳಿಸಿದರು.
ತಾಲ್ಲೂಕು ಕೃಷಿ ಇಲಾಖೆಯಿಂದ ರೈತರಿಗೆ ಪರಿಶಿಷ್ಟ ಜಾತಿ ವರ್ಗದವರಿಗೆ ವಿವಿಧ ರೀತಿಯ ಸೌಲಭ್ಯಗಳು ಕೃಷಿ ಇಲಾಖೆಯಿಂದ ದೊರಕುವುದರಿಂದ ರೈತರು ತಪ್ಪದೆ ಬೆಳೆ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸುವುದರೊಂದಿಗೆ ವಿವಿಧ ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳನ್ನ ಕಡ್ಡಾಯವಾಗಿ ಪಡೆಯುವಂತಾಗಬೇಕೆಂದರು.
ರೈತರು ಬೆಳೆ ವಿಮೆಯಿಂದ ಭತ್ತ ಹಾಗೂ ರಾಗಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವುದರಿಂದ ಬೆಳೆ ವಿಮೆ ಪಡೆಯುವಂತಾಗಬೇಕೆಂದರು.
ತಾಲೂಕಿನಲ್ಲಿ ಈ ಸಾಲಿನ ಜುಲೈ ವರೆಗೂ ೧೨೩ ಎಂಎಂ ವಾಡಿಕೆಯಂತೆ ಮಳೆ ಆಗಬೇಕಾಗಿದ್ದು ಇಲ್ಲಿಯವರೆಗೂ ೨೪೫ ಎಂಎಂ ವಾಡಿಕೆಗಿಂತ ಎರಡರಷ್ಟು ಮಳೆ ಬಿದ್ದಿದೆ. ತಾಲ್ಲೂಕಿನ ಆರು ರೈತ ಸಂಪರ್ಕ ಕೇಂದ್ರದಲ್ಲಿ ಈಗಾಗಲೇ ೪೦೦ ಕ್ವಿಂಟಲ್ ರಾಗಿ ಬಿತ್ತನೆ ಬೀಜ ದಾಸ್ತಾನು ಇದ್ದು ಅದರಂತೆ ೨೦೦ ಕ್ವಿಂಟಾಲ್ ಭತ್ತದ ಬೀಜ ದಾಸ್ತಾನು ಇದೆ ಎಂದು ವಿವರಿಸಿದರೆ, ರೈತ ಶಕ್ತಿ ಯೋಜನೆ ಅಡಿಯಲ್ಲಿ ಒಂದು ಎಕರೆಯಿಂದ ೫ ಎಕರೆ ಹುಳುಮೆ ಮಾಡಲು ಉಚಿತವಾಗಿ ಎಕರೆಗೆ ೨೫೦ ರೂ.ಗಳಂತೆ ಐದು ಎಕರೆಗೆ ೧೨೫೦ ರೂ. ಡೀಸೆಲ್ ಖರ್ಚನ್ನು ಸರ್ಕಾರ ಭರಿಸಲಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಹಾಗೂ ಇತರೆ ಸಾಮಾನ್ಯ ರೈತರಿಗೆ ಇಲಾಖೆಯಿಂದ ಕೃಷಿ ಸಲಕರಣೆ ಯಂತ್ರಗಳನ್ನು ರಿಯಾಯಿತಿ ದರದಲ್ಲಿ ಎಸ್ಸಿ, ಎಸ್ಟಿ ರೈತರಿಗೆ ಶೇ. ೯೦ರಷ್ಟು, ಇತರೆ ರೈತರಿಗೆ ಶೇ. ೫೦ ರಷ್ಟು ರಿಯಾಯಿತಿ ದರದಲ್ಲಿ ಒದಗಿಸಲಾಗುವುದು. ತಾಲ್ಲೂಕಿನಲ್ಲಿ ೪೦,೬೮೦ ಹೆಕ್ಟರ್ ಜಮೀನು ಪೂರ್ವ ಮುಂಗಾರಿನಂತೆ ಬಿತ್ತನೆ ಕಾರ್ಯ ಆರಂಭಗೊಂಡಿದ್ದು ಬಿತ್ತನೆ ಬೀಜ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ರೈತರಿಗೆ ಕಾಲಕಾಲಕ್ಕೆ ಸಿಗುವಂತೆ ರಸಗೊಬ್ಬರ ೨೫೦೦ ಟನ್ ದಾಸ್ತಾನು ಮಾಡಿದ್ದು ಇಲ್ಲಿಯವರೆಗೂ ಯಾವುದೇ ಸಮಸ್ಯೆ ಉಂಟಾಗಿರುವುದಿಲ್ಲ ಎಂದು ವಿವರಿಸಿದರೆ ರೈತರು ತಾಲ್ಲೂಕಿನಲ್ಲಿ ಉತ್ತಮ ರಾಗಿ ಬೆಳೆಗೆ ರೈತ ಪ್ರಶಸ್ತಿಯನ್ನು ನೀಡುವುದರೊಂದಿಗೆ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡುವ ವ್ಯವಸ್ಥೆಯನ್ನು ಸರ್ಕಾರ ಕೈಗೊಂಡಿದೆ ಎಂದರು.
ಕೃಷಿ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳನ್ನು ರೈತರು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.