ಸೌಲಭ್ಯ ಕೋರಿ  ಜಿಲ್ಲಾಧಿಕಾರಿಗಳಿಗೆ  ಮನವಿ

 ಹಿರಿಯೂರು : ನ.9- ಹಿರಿಯೂರು ತಾಲ್ಲೂಕು ಜೆ.ಜಿ.ಹಳ್ಳಿ ಹೋಬಳಿ, ಗೌಡನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ನಜೀರ್ ಕಾಲೋನಿಯಲ್ಲಿ ಸುಮಾರು 52 ವಾಸದ ಮನೆಗಳಿದ್ದು ಅರಣ್ಯ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿ ಮಾಡಿಕೊಂಡು ವಾಸವಾಗಿರುತ್ತೇವೆ. ನಮ್ಮಗಳಿಗೆ ಯಾವುದೇ ಭೂಮಿ, ವಸತಿ ವಗೈರೆ ಇರುವುದಿಲ್ಲ. ಸುಮಾರು 35 ವರ್ಷಗಳಿಂದಲೂ ಅರಣ್ಯದಲ್ಲಿ ವಾಸವಿದ್ದು ಸದರಿ ಪ್ರದೇಶ 2001ಕ್ಕಿಂತ ಮುಂಚೆ ಸದರಿ ಭೂಮಿ ಹುಲ್ಲುಬನ್ನಿ ಖರಾಬು ಭೂಮಿಯಾಗಿದ್ದು, 1995ರಲ್ಲಿ 52 ಜನ ಬಗರ್‌ಹಕುಂ ಸಾಗುವಳಿದಾರರಿಗೆ ತಲಾ 4  ಎಕರೆಯಂತೆ ಮಂಜೂರಾಗಿದ್ದು, ಇದುವರೆಗೂ ಸಾಗುವಳಿ ಚೀಟಿ, ಹಕ್ಕುಪತ್ರ ನೀಡಿರುವುದಿಲ್ಲ. 2001ರಲ್ಲಿ ಸದರಿ ಭೂಮಿಯು ಅರಣ್ಯ ಇಲಾಖೆಗೆ ಹಸ್ತಾಂತರವಾಗಿರುತ್ತದೆ. ಸದರಿ ಗ್ರಾಮಕ್ಕೆ ಕುಡಿಯುವ ನೀರು, ವಿದ್ಯುತ್ ರಸ್ತೆ, ಚರಂಡಿ, ಶಾಲೆ, ಬಸ್ ವ್ಯವಸ್ಥೆ ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುತ್ತೇವೆ. ಸದರಿ ಭೂಮಿಗೆ ಟಿ.ಟಿ. ಸಹ ಕಟ್ಟಿರುತ್ತೇವೆ. ಕುಡಿಯುವ ನೀರಿಗೋಸ್ಕರ ಸರ್ಕಾರದ ವತಿಯಿಂದ 3 ಕೊಳವೆಬಾವಿ ಕೊರೆಸಿದ್ದು ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿರುವುದಿಲ್ಲ. ಸಂಬಂದಪಟ್ಟ ಎಲ್ಲಾ ಇಲಾಖೆಗಳಿಗೂ ಮನವಿ ಮಾಡಿದ್ದರೂ ಸಹ ಕಾರ್ಯಗತವಾಗಿರುವುದಿಲ್ಲ. ಸರ್ಕಾರದ ವತಿಯಿಂದ ಮೂಲಭೂತ ಸೌಲಭ್ಯ ಒದಗಿಸಿಕೊಡುವಂತೆ ಕೋರಿಕೊಳ್ಳುತ್ತೇವೆ. ನಜೀರ್ ಕಾಲೋನಿ ಉಡುವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಮತ ಚಲಾಯಿಸುತ್ತಿದ್ದು, ಸದರಿ ಭೂಮಿ ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ರೇಷನ್ ಮತ್ತು ಆಧಾರ್ ಕಾರ್ಡ್ ಗೌಡನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಮತದಾನ ಮಾತ್ರ ಉಡುವಳ್ಳಿ ಪಂಚಾಯಿತಿ ವ್ಯಾಪ್ತಿಗೆ ಒಳಪಡುವುದರಿಂದ ಮತದಾನವನ್ನು ಸಹ ಗೌಡನಹಳ್ಳಿ ಪಂಚಾಯ್ತಿಗೆ ಸೇರಿಸಿ ಕೂಡಲೇ ಮೇಲ್ಕಂಡ ಮೂಲಭೂತ ಸೌಕರ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಿ ಕೊಡುವಂತೆ ಹಾಗೂ ಜಮೀನಿನ ಹಕ್ಕು ಪತ್ರ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಅರ್ಪಿಸಿರುತ್ತಾರೆ. ಈ ಸಂದರ್ಭದಲ್ಲಿ ರೈತ ಮುಖಂಡರಾದ ಹೊರಕೇರಪ್ಪ, ಶಿವಕುಮಾರ್, ಲಕ್ಷ್ಮಿಕಾಂತ್,ದಾದಾಪೀರ್, ತಿಪ್ಪೇಸ್ವಾಮಿ ಮತ್ತಿತರರು  ಇದ್ದರು.