ಸೌಲಭ್ಯಗಳ ಹೆಚ್ಚಿಸಲು ಅಧಿಕಾರಿಗಳು ಒತ್ತುಕೊಟ್ಟು ಕೆಲಸ ಮಾಡಿ;   ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ಸಂಜೆವಾಣಿ ವಾರ್ತೆ
ದಾವಣಗೆರೆ; ಜು.9; ದಾವಣಗೆರೆ ಜಿಲ್ಲೆ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಅಭಿವೃದ್ದಿ ಪಥದಲ್ಲಿ ಸದಾ ಮುನ್ನೆಡೆಯುತ್ತಿತ್ತು, ಆದರೆ ಅಭಿವೃದ್ದಿ ಪಥದಿಂದ ಹಿಮ್ಮುಖವಾಗಿದ್ದು ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಸುಧಾರಣೆ ಸೇರಿದಂತೆ ವಸತಿ ಸೌಲಭ್ಯ ಮತ್ತು ನೀರಾವರಿ ಸೌಕರ್ಯವನ್ನು ಹೆಚ್ಚಿಸುವ ಮೂಲಕ ಜಿಲ್ಲೆಯನ್ನು ಅಭಿವೃದ್ದಿ ಪಥದ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಅಧಿಕಾರಿಗಳು ಶ್ರಮವಹಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.ಅವರು  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಸಕ್ತ ಸಾಲಿನ ಮೊದಲ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ 5 ವರ್ಷಗಳ ಹಿಂದೆ ಅನೇಕ ಕ್ಷೇತ್ರದಲ್ಲಿ ಜಿಲ್ಲೆ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಮುಂದೆ ಇರುತ್ತಿತ್ತು. ಆಡಳಿತದ ಬದಲಾವಣೆಯಿಂದ ಜಿಲ್ಲೆ ಅಭಿವೃದ್ದಿಯಿಂದ ಹಿನ್ನಡೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಬೇಕಾಗಿದೆ. ಸರ್ಕಾರದ ಮಟ್ಟದಲ್ಲಿ ಜಿಲ್ಲೆಗೆ ಸಂಬಂಧಿಸಿದ ಕೆಲಸಗಳಿದ್ದಲ್ಲಿ ಅದನ್ನು ಬಗೆಹರಿಸಿಕೊಡಲಾಗುತ್ತದೆ ಎಂದರು.ಭ್ರಷ್ಟಾಚಾರ ಮುಕ್ತ ಆಡಳಿತ; ಯಾವುದೇ ಇಲಾಖೆ ಅಧಿಕಾರಿಗಳು ಕೆಲಸ ಮಾಡುವುದರಲ್ಲಿ ಭ್ರಷ್ಟಾಚಾರ ಮುಕ್ತರಾಗಿರಬೇಕು. ಸರ್ಕಾರದ ಗ್ಯಾರಂಟಿ ಯೋಜನೆಗಳು ಜನಪರವಾದ ಯೋಜನೆಗಳಾಗಿದ್ದು ಆಯವ್ಯಯದಲ್ಲಿ ಎಲ್ಲಾ ಐದು ಯೋಜನೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕಾಗಿದೆ. ಮತ್ತು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅನುಷ್ಟಾನ ಮಾಡಬೇಕಾಗಿದ್ದು ವಿಶೇಷವಾಗಿ ಇನ್ನೂ ಹಲವಾರು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಾಗ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಜನರ ಆರೋಗ್ಯ ಕಾಪಾಡಿ; ಕೊರೋನಾ ಸಂದರ್ಭದಲ್ಲಿ ಜನರ ಜೀವಗಳೊಂದಿಗೆ ಚೆಲ್ಲಾಟವಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ಆದರೆ ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ಇಲಾಖೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕಾಗಿದೆ. ಜನರಿಗೆ ಆರೋಗ್ಯ ಸುರಕ್ಷತೆಗೆ ನೀಡಲಾಗಿರುವ ಎಬಿಆರ್‍ಕೆ ಕಾರ್ಡ್ ವಿತರಣೆ, ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ರೆಫರಲ್ ಸಕಾಲದಲ್ಲಿ ನೀಡಬೇಕು. ಅಂಬುಲೆನ್ಸ್ ಸೇವೆ ಅಗತ್ಯವಿರುವವರಿಗೆ ಸಿಗುವಂತಿರಬೇಕು. ಸಿ.ಜಿ. ಆಸ್ಪತ್ರೆಯಲ್ಲಿ ಎಂ.ಆರ್.ಐ.ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಲು ಸೂಚನೆ ನೀಡಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಗ್ರಾಮಾಂತರ ಪ್ರದೇಶದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಕರ್ತವ್ಯ ನಿರತರಾಗಿರುವಂತೆ ನೋಡಿಕೊಳ್ಳಲು ಸೂಚನೆ ನೀಡಿದರು.