ಸೌರಶಕ್ತಿ ಉತ್ಪಾದನೆ ದೇಶದಲ್ಲೇ ಕರ್ನಾಟಕ ಮೊದಲು

ಬೆಂಗಳೂರು, ಮಾ. ೩೦: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಸ್ವಲ್ಪಮಟ್ಟಿಗೆ ತಗ್ಗಿದೆ. ಸೌರಶಕ್ತಿ ಪ್ರತಿನಿತ್ಯ ಶೇ.೨೦ರಷ್ಟು ರಾಜ್ಯದ ವಿದ್ಯುತ್ ಅಗತ್ಯತೆಯನ್ನು ಪೂರೈಸುತ್ತಿದೆ.
ಪ್ರತಿದಿನ ರಾಜ್ಯದಲ್ಲಿ ೭,೩೪೬ ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮುಖ್ಯವಾಗಿ ದೇಶದ ಅತಿದೊಡ್ಡ ಸೌರ ಕೇಂದ್ರವಾದ ತುಮಕೂರು ಜಿಲ್ಲೆ ಪಾವಗಡದಲ್ಲಿ ಅತ್ಯಧಿಕ ಸೌರಶಕ್ತಿ ಉತ್ಪಾದನೆಯಾಗುತ್ತಿದೆ.
ಕಳೆದ ವಾರ ಲೋಕಸಭೆಯಲ್ಲಿ ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್ ಈ ವಿಷಯವನ್ನು ಬಹಿರಂಗಪಡಿಸಿದರು. ದೇಶದಲ್ಲೇ ಕರ್ನಾಟಕ ಸೌರಶಕ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ. ಕರ್ನಾಟಕದ ನಂತರದ ಸ್ಥಾನವನ್ನು ತಮಿಳುನಾಡು ಹೊಂದಿದ್ದು, ಇಲ್ಲಿ ಪ್ರತಿನಿತ್ಯ ೪,೪೦೩ ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಆ ನಂತರದ ಅಂದರೆ ಮೂರನೇ ಸ್ಥಾನ ಗುಜರಾತಿನಲ್ಲಿ ೪,೦೬೮ ಮೆಗಾವ್ಯಾಟ್‌ನಷ್ಟು ಸೌರಶಕ್ತಿ ಉತ್ಪಾದನೆಯಾಗುತ್ತಿದೆ.

ಪ್ರತಿನಿತ್ಯ ೧೩ ಸಾವಿರಕ್ಕೂ ಹೆಚ್ಚು ಸೌರಶಕ್ತಿ ಉತ್ಪಾದನೆ ಗುರಿ
ರಾಜ್ಯದ ಕೆಪಿಸಿಎಲ್ ಮತ್ತಷ್ಟು ಸೌರಶಕ್ತಿ ಉತ್ಪಾದನೆಗೆ ಒತ್ತು ನೀಡಿದೆ. ರಾಜ್ಯದ ಶೇ.೫೦ರಷ್ಟು ವಿದ್ಯುತ್ ಅಗತ್ಯತೆಯನ್ನು ಸೌರಶಕ್ತಿಯಿಂದ ಭರಿಸುವ ಗುರಿ ಹೊಂದಿದೆ. ಪ್ರತಿನಿತ್ಯ ೧೩,೫೪೪ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದು, ಈಗಾಗಲೇ ರಾಜ್ಯ ಸರ್ಕಾರ ಪೈಜ್ಹಾಬಾದ್ ಮತ್ತು ಕಲಬುರಗಿಯಲ್ಲಿ ಸೋಲಾರ್ ಪಾರ್ಕ್ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಂಡಿದೆ. ಇಲ್ಲಿಂದ ೫೦೦ ಮೆಗಾವ್ಯಾಟ್‌ನಷ್ಟು ವಿದ್ಯುತ್ ಉತ್ಪಾದಿಸಲಾಗುವುದು ಎಂದು ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ (ಇಂಧನ) ಕಪಿಲ್ ಮೋಹನ್ ತಿಳಿಸಿದ್ದಾರೆ.