ಸೌರವ್‌ಗಂಗೂಲಿ ಆಸ್ಪತ್ರೆಯಿಂದ ನಾಳೆ ಬಿಡುಗಡೆ

ಕೊಲ್ಕತ್ತ(ವೆಸ್ಟ್‌ಬೆಂಗಾಲ),ಜ.೫- ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ಗಂಗೂಲಿ ಅವರನ್ನು ನಾಳೆ ಅಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ನಂತರ ಮನೆಯಲ್ಲಿಯೇ ಅವರ ಆರೋಗ್ಯ ಮೇಲ್ವಿಚಾರಣೆ ಮಾಡಲಾಗುವುದು ಎಂದು ಡಾ. ರೂಪಾಲಿ ಬಸು ತಿಳಿಸಿದ್ದಾರೆ.
ವುಡ್‌ಲ್ಯಾಂಡ್ ಆಸ್ಪತ್ರೆಯ ಸಿಇಓ ಆಗಿರುವ ರೂಪಾಲಿ ಅವರು ಗಂಗೂಲಿ ಅವರ ಆರೋಗ್ಯ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿ, ೪೮ ವರ್ಷದ ಗಂಗೂಲಿ ಮುಂದಿನ ೨-೩ ವಾರಗಳ ನಂತರ ಮತ್ತೊಮ್ಮೆ ವೈದ್ಯಕೀಯ ಪರೀಕ್ಷಗೆ ಒಳಪಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿ ಅವರು, ಗಂಗೂಲಿಗೆ ಚಿಕಿತ್ಸೆ ನೀಡುತ್ತಿರುವ ೯ ವೈದ್ಯರುಳ್ಳ ತಂಡವನ್ನು ಭೇಟಿ ಮಾಡಿದ್ದರು. ಈ ವೇಳೆ ಗಂಗೂಲಿ ಅವರ ಮುಂದಿನ ಚಿಕಿತ್ಸೆ ಕುರಿತಂತೆ ಚರ್ಚಿಸಲಾಗಿದೆ.
ನಿನ್ನೆ ಕೇಂದ್ರ ಹಣಕಾಸು ಮತ್ತು ಕಾರ್ಪರೇಟ್ ವ್ಯವಹಾರಗಳ ರಾಜ್ಯ ಸಚಿವ ಅನುರಾಗ್ ಠಾಕೂರ್ ವುಡ್‌ಲ್ಯಾಂಡ್ ಆಸ್ಪತ್ರೆಗೆ ಭೇಟಿ ನೀಡಿ ಗಂಗೂಲಿ ಆರೋಗ್ಯ ವಿಚಾರಿಸಿದ್ದರು. ಉಳಿದಂತೆ ರಾಜ್ಯಸಭಾ ಸದಸ್ಯ ಸ್ವಪನ್‌ದಾಸ್ ಗುಪ್ತ ಮತ್ತು ಕಾಂಗ್ರೆಸ್ ಮುಖಂಡ ಅಬ್ದುಲ್‌ಮನನ್ ಸಹ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಗಂಗೂಲಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಕ್ಷೇಮ ವಿಚಾರಿಸಿದರು.