ಸೌತೆಕಾಯಿ ಉಪಯೋಗಗಳು

ಸೌತೆಕಾಯಿಯ ನೀರು ಚರ್ಮಕ್ಕೆ ಅತ್ಯುತ್ತಮವಾಗಿದೆ. ಇದು ಕಣ್ಣುಗಳಿಗೆ ತಂಪು ನೀಡುವ ಒಂದು ವಿಧಾನವಾಗಿದೆ. ಆದರೆ ಸೌತೆಕಾಯಿ ಕೇವಲ ಕಣ್ಣುಗಳಿಗೆ ಮಾತ್ರವಲ್ಲ, ದೇಹದ ಇತರ ಭಾಗದ ಚರ್ಮಗಳಿಗೂ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಸೌತೆಕಾಯಿಯ ಮುಖಲೇಪದ ಸರಿಯಾದ ಉಪಯೋಗವನ್ನು ಪಡೆದುಕೊಂಡರೆ ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಮುಖಲೇಪ ಅಥವಾ ಸೌಂದರ್ಯಸೇವೆಯ ಅಗತ್ಯವೇ ಇಲ್ಲ! ಸೌತೆಕಾಯಿಯ ನಿಯಮಿತ ಬಳಕೆಯಿಂದ ಚರ್ಮ ಗೌರವರ್ಣವನ್ನು ಪಡೆಯುವುದು ಮಾತ್ರವಲ್ಲ, ಹಳೆಯ ಕಲೆಗಳನ್ನೂ ನಿಧಾನವಾಗಿ ತೊಲಗಿಸುತ್ತದೆ. ಚರ್ಮಕ್ಕೆ ಮಾತ್ರವಲ್ಲ, ಕೂದಲು ಮತ್ತು ಪಾದಗಳಿಗೂ ಉತ್ತಮ ಆರೈಕೆ ನೀಡುತ್ತದೆ. ಒಂದು ವೇಳೆ ಕೂದಲ ತುದಿ ಸೀಳಾಗಿದ್ದರೆ ಸೌತೆಕಾಯಿಯ ಲೇಪನ ಹಚ್ಚುವುದರಿಂದ ಶೀಘ್ರವೇ ಈ ತೊಂದರೆ ಇಲ್ಲವಾಗುತ್ತದೆ.
ಚರ್ಮದ ವರ್ಣವನ್ನು ಗೌರವರ್ಣದತ್ತ ಬದಲಿಸಲು ನೆರವಾಗುತ್ತದೆ
ಒಂದು ವೇಳೆ ಚರ್ಮ ಬಿಸಿಲು ಅಥವಾ ಇನ್ನಾವುದೋ ಕಾರಣಕ್ಕೆ ತನ್ನ ಸಹಜ ಕಳೆ ಮತ್ತು ವರ್ಣವನ್ನು ಕಳೆದುಕೊಂಡಿದ್ದರೆ ಸೌತೆಯ ಲೇಪನದ ಸತತ ಬಳಕೆಯಿಂದ ನಿಮ್ಮ ಸಹಜ ವರ್ಣವನ್ನು ಮರಳಿ ಪಡೆಯಬಹುದು. ಇದಕ್ಕಾಗಿ ಅರ್ಧ ಎಳೆಸೌತೆಕಾಯಿಯನ್ನು ಸಿಪ್ಪೆಸಹಿತ ತುರಿದು ಎರಡು ಚಮಚ ಬೆಟ್ಟದ ತಾವರೆ (ಮರದ ಮೇಲೆ ಬೆಳೆಯುವ ಹಳದಿ ಬಣ್ಣದ ಹೂವುಗಳಂತೆ ತೋರುವ ಗಿಡ) ಮತ್ತು ಎರಡು ಚಮಚ ನೀರು ಸೇರಿಸಿ ಅರೆಯಿರಿ. ಈ ಲೇಪನವನ್ನು ಪ್ರತಿದಿನ ಸ್ವಚ್ಛವಾಗಿ ಮುಖ ತೊಳೆದುಕೊಂಡ ಬಳಿಕ ನಯವಾದ ಮಸಾಜ್ ಮೂಲಕ ಹಚ್ಚಿಕೊಂಡು ಕೊಂಚ ಸಮಯ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಲೇಬೇಡಿ. ಕೆಲವೇ ದಿನಗಳಲ್ಲಿ ನಿಮ್ಮ ಚರ್ಮ ತನ್ನ ಸಹಜ ವರ್ಣವನ್ನು ಪಡೆಯತೊಡಗುತ್ತದೆ.
ಸೌಂದರ್ಯಕ್ಕಾಗಿ ಬ್ಲೂಬೆರಿ ಸೌತೆ ಮುಖಲೇಪ ಬಳಸಿ
ಅರ್ಧ ಎಳೆಸೌತೆ, ಎರಡು ದೊಡ್ಡಚಮಚ ಓಟ್ಸ್ ಮತ್ತು ಕೆಲವಾರು ಬ್ಲೂಬೆರಿ ಹಣ್ಣುಗಳನ್ನು ಸೇರಿಸಿ ಚೆನ್ನಾಗಿ ಅರೆಯಿರಿ. ಈ ಲೇಪನವನ್ನು ಮುಖಕ್ಕೆ (ಕಣ್ಣುರೆಪ್ಪೆಗಳನ್ನು ಬಿಟ್ಟು) ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ಮೈಯನ್ನು ತಂಪಾಗಿಡಲು ನೆರವಾಗುತ್ತದೆ
ಒಂದು ವೇಳೆ ನೀವು ಇಡಿಯ ದಿನ ಮನೆಯಿಂದ ಹೊರಗೇ ಇರಬೇಕಾದರೆ ಸೌತೆಯ ರಸದ ಸಿಂಪರಣೆ (ಸ್ಪ್ರೇ) ಉಪಯುಕ್ತವಾಗಿದೆ. ಇದನ್ನು ತಯಾರಿಸಲು ಒಂದು ಚಿಕ್ಕ ಎಳೆಸೌತೆಯನ್ನು ತುರಿದು ತಣಿಸಿದ ಹಸಿರು ಟೀ ಸೇರಿಸಿ. ಇದಕ್ಕೆ ಒಂದು ದೊಡ್ಡ ಚಮಚ ಲೋಳೆಸರದ ರಸ ಮತ್ತು ಕೆಲವು ಹನಿ ಗುಲಾಬಿನೀರನ್ನು ಮಿಶ್ರಣ ಮಾಡಿ ಚೆನ್ನಾಗಿ ಕಲಕಿ. ಇದನ್ನು ಸೋಸಿ ಸ್ಪ್ರೇ ಮಾಡಬಲ್ಲ ಬಾಟಲಿಯೊಂದರಲ್ಲಿ ಹಾಕಿ. ಬಿಸಿಲಿಗೆ ಹೋಗುವ ಮೊದಲು ಮೈಗೆ ಸಿಂಪಡಿಸಿಕೊಂಡು ಹೋದರೆ ಬಿಸಿಲಿನ ಝಳಕ್ಕೆ ಚರ್ಮ ಕಪ್ಪಗಾಗದೇ ಇರುವ ಜೊತೆಗೇ ಉರಿಯನ್ನೂ ತಡೆಯಲು ಸಾಧ್ಯವಾಗುತ್ತದೆ.
ಮುಖದ ಹಳೆಯ ಕಲೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ
ಹದಿಹರೆಯದಲ್ಲಿ ಗೊತ್ತಿಲ್ಲದೇ ಮೊಡವೆಗಳನ್ನು ಚಿವುಟಿದ್ದರ ಪರಿಣಾಮವಾಗಿ ಅಲ್ಲಿ ಚರ್ಮದ ಬಣ್ಣ ಗಾಢವಾಗಿದ್ದು ಕಲೆಯನ್ನು ಮೂಡಿಸಿರುತ್ತದೆ. ಇದನ್ನು ಸೌತೆಯ ಸುಲಭ ಉಪಯೋಗದಿಂದ ನಿವಾರಿಸಿ ಕಲೆಯಿಲ್ಲದ ಮುಖ ಹೊಂದಬಹುದು. ಇದಕ್ಕಾಗಿ ಅರ್ಧ ಎಳೆಸೌತೆ ತುರಿದು ಒಂದು ಮೊಟ್ಟೆ, ಕೆಲವು ರೋಸ್ಮರಿ ಅಗತ್ಯ ತೈಲದ ಹನಿಗಳನ್ನು ಸೇರಿಸಿ ಅರೆಯಿರಿ. ಈ ಲೇಪನವನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
ಪಾದಗಳ ಆರೈಕೆಗೂ ಬಳಕೆಯಾಗುತ್ತದೆ
ಪಾದಗಳನ್ನು ಬಿಳಿದಾಗಿಸುವುದು ಮತ್ತು ಸೌಮ್ಯವಾಗಿಸಲೂ ಸೌತೆಕಾಯಿಯ ಬಳಕೆಯಾಗುತ್ತದೆ. ಇದಕ್ಕಾಗಿ ಒಂದು ಎಳೆಸೌತೆ, ಎರಡು ದೊಡ್ಡಚಮಚ ಆಲಿವ್ ಎಣ್ಣೆ, ಎರಡು ದೊಡ್ಡ ಚಮಚ ಲಿಂಬೆರಸ ಸೇರಿಸಿ ಅರೆಯಿರಿ. ಈ ಲೇಪನವನ್ನು ಕೊಂಚವೇ ಬಿಸಿಮಾಡಿ ಒಂದು ದೊಡ್ಡ ಪಾತ್ರೆಯಲ್ಲಿ ಹಾಕಿ. ಈಗ ನಿಮ್ಮ ಪಾದಗಳನ್ನು ಈ ಲೇಪನದಲ್ಲಿ ಮುಳುಗುವಂತೆ ಇಡಿ. ಪಾದಗಳನ್ನು ಅಕ್ಕಪಕ್ಕ ಹೊರಳಾಡಿಸಿ ಲೇಪನ ಇಡಿಯ ಪಾದಗಳನ್ನೂ, ಕಾಲ್ಬೆರಳುಗಳ ಸಂದುಗಳನ್ನೂ ಆವರಿಸುವಂತೆ ಮಾಡಿ. ಹದಿನೈದು ನಿಮಿಷದ ಬಳಿಕ ಹೊರತೆಗೆದು ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಈ ವಿಧಾನವನ್ನು ರಾತ್ರಿ ಮಲಗುವ ಮುನ್ನ ಮಾಡಿದರೆ ಉತ್ತಮ.