ಸೌಜನ್ಯ ಪ್ರಕರಣ ಮರು ತನಿಖೆಗೆ ಆಗ್ರಹ,  ಬೆಳ್ತಂಗಡಿಯಿಂದ ಬೆಂಗಳೂರಿಗೆ ಪಾದಯಾತ್ರೆ

ಸಂಜೆವಾಣಿ ವಾರ್ತೆ

ದಾವಣಗೆರೆ.ಆ.೨೫: ಬೆಳ್ತಂಗಡಿಯ ಸೌಜನ್ಯ ಹತ್ಯೆಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ತಕ್ಷಣವೇ ಮರು ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಗ್ರಹಿಸಿ ದೌರ್ಜನ್ಯದ ವಿರುದ್ಧ ಸೌಜನ್ಯ ಎನ್ನುವ ಪಾದಯಾತ್ರೆ ಆಗಸ್ಟ್ 26ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ‌ಪಕ್ಷದ ರಾಜ್ಯ ಕಾರ್ಯದರ್ಶಿ, ದಾವಣಗೆರೆ ಜಿಲ್ಲೆಯ ಉಸ್ತುವಾರಿ ಮಲ್ಲಿಕಾರ್ಜುನಯ್ಯ ಭಟ್ರಳ್ಳಿ ಒತ್ತಾಯಿಸಿದರು.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,‌ ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ಈಗಲಾದರೂ ನ್ಯಾಯ ಸಿಗುವಂತಾಗಲು ಮತ್ತು ಅಪರಾಧ ಕೃತ್ಯ ಎಸಗಿದವರು ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ನಿರುತ್ತೇಜಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.ಅಲ್ಲದೇ ಈ ವಿಚಾರವಾಗಿ ಸಮಾಜದಲ್ಲಿ ಜನಾಭಿಪ್ರಾಯ ರೂಪಿಸಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರ ನೇತೃತ್ವದಲ್ಲಿ ಇದೇ ಆಗಸ್ಟ್ 26ರಿಂದ ಬೆಳ್ತಂಗಡಿಯಿಂದ ಆರಂಭಿಸಿ ಧರ್ಮಸ್ಥಳದ ಮಾರ್ಗವಾಗಿ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಸೆಪ್ಟೆಂಬರ್ 8ರಂದು ಬೆಂಗಳೂರಿನ ವಿಧಾನ ಸೌಧ ತಲುಪಲಿದೆ ಎಂದು ಮಾಹಿತಿ ನೀಡಿದರು.ಸುಮಾರು 14 ದಿನಗಳ ಕಾಲ ನಡೆಯಲಿರುವ ಸುಮಾರು 330 ಕಿಲೋಮೀಟರ್‌ಗಳ ಈ ಪಾದಯಾತ್ರೆಯಲ್ಲಿ ಕೆಆರ್ ಎಸ್ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಲವು ಹಕ್ಕೊತ್ತಾಯಗಳನ್ನು ಮಂಡಿಸಲಾಗುವುದು ಎಂದರು.ಪಾದಯಾತ್ರೆ ಬೆಳ್ತಂಗಡಿ, ಧರ್ಮಸ್ಥಳ, ಉಜಿರೆ, ಚಾರ್ಮಾಡಿ ಘಾಟ್, ಬಣಕಲ್, ಜನ್ನಾಪುರ, ಬೇಲೂರು, ಹೂವಿನ ಹಳ್ಳಿ ಕಾವಲ್, ಶಾಂತಿಗ್ರಾಮ, ಚನ್ನರಾಯಪಟ್ಟಣ, ಕದಬಳ್ಳಿ, ಯಡಿಯೂರು, ಕುಣಿಗಲ್, ಸೋಲೂರು, ಮಾಕಳಿ ಮೂಲಕ ಬೆಂಗಳೂರು ತಲುಪಲಿದೆ ಎಂದು ಹೇಳಿದರು.ಸುದ್ದಿಗೋಷ್ಟಿಯಲ್ಲಿ ದಾವಣಗೆರೆ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಗೌಡ, ಷಹನವಾಜ್ ಖಾನಂ, ಎಂ.ಬಿ.ತಿಪ್ಪೇಸ್ವಾಮಿ, ಎನ್.ಎಸ್.ಅಭಿಷೇಕ್, ರಹಮತ್ ವುಲ್ಲಾ ಇತರರು ಇದ್ದರು.