
ಸಂಜೆವಾಣಿ ವಾರ್ತೆ
ತಿ.ನರಸೀಪುರ: ಜು.21:- 2012ರಲ್ಲಿ ಧರ್ಮಸ್ಥಳ ಪುಣ್ಯಕ್ಷೇತ್ರದ ಆಸುಪಾಸಿನಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಸೌಜನ್ಯ ಪ್ರಕರಣದ ತನಿಖೆ ನಡೆಸಿದ ಸಿಬಿಐ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿದ್ದು,ಇದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ ಮತ್ತು ಆತ್ಮಾವಲೋಕನ) ಖಂಡಿಸಿದೆ.
ಹಾಗಾಗಿ ರಾಜ್ಯ ಸರ್ಕಾರ ಸೌಜನ್ಯ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಅಗ್ರಹಿಸಿತು.
ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಈ ಬಗ್ಗೆ ದಲಿತ ಸಂಘರ್ಷ ಸಮಿತಿಯು ಧರಣಿ ನಡೆಸಿ ಸೌಜನ್ಯ ಪ್ರಕರಣವನ್ನು ಸರ್ಕಾರ ಪುನಃ ತನಿಖೆ ನಡೆಸಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸರ್ಕಾರಕ್ಕೆ ತಹಶೀಲ್ದಾರ್ ಮುಖೇನ ಮನವಿ ಸಲ್ಲಿಸಿತು.ಪ್ರತಿಭಟನೆ ಕುರಿತು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಆಲಗೂಡು ಚಂದ್ರಶೇಖರ್ ಮಾತನಾಡಿ,ಸೌಜನ್ಯ ಪ್ರಕರಣದಲ್ಲಿ ರಾಜಕೀಯ ಪ್ರಭಾವದಿಂದ ಅಪರಾಧಿಗಳ ರಕ್ಷಣೆ ನಡೆಯುತ್ತಿದ್ದು,ದೇಶದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಖುಲಾಸೆ ಮಾಡಲಾಗುತ್ತಿದೆ.ಇದು ಕಾರ್ಯಾಂಗದ ಪ್ರಭಾವದಿಂದ ನ್ಯಾಯಾಂಗ ವ್ಯವಸ್ಥೆಗೆ ಅಧೀನ ಸಂಸ್ಥೆಗಳು ಮಾಡಿದ ದೊಡ್ಡ ಅಪಮಾನವಾಗಿದೆ. ಹಾಗಾಗಿ ಸೌಜನ್ಯ ಪ್ರಕರಣವನ್ನು ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇತ್ತೀಚಿಗೆ ಮಠಮಾನ್ಯಗಳು ಮತ್ತು ಆಸುಪಾಸಿನಲ್ಲಿ ಅತ್ಯಾಚಾರ ಪ್ರಕರಣಗಳು ನಡೆಯುತ್ತಿರುವುದು ಸಮಾಜ ತಲೆತಗ್ಗಿಸುವಂತಹ ವಿಚಾರ.ಸೌಜನ್ಯ ಪ್ರಕರಣ ಕೂಡ ಧರ್ಮಸ್ಥಳ ಪುಣ್ಯಕ್ಷೇತ್ರದ ಆಸುಪಾಸಿನಲ್ಲಿ ನಡೆದಿದ್ದು, ಪ್ರಕರಣವನ್ನು ರಾಜಕೀಯ ಪ್ರಭಾವದಿಂದ ಮುಚ್ಚಿ ಹಾಕಲು ಷಡ್ಯಂತ ನಡೆದಿದೆ.ಹಾಗಾಗಿ ಸರ್ಕಾರ ಸೌಜನ್ಯ ಪ್ರಕರಣದ ಮರು ತನಿಖೆಗೆ ಆದೇಶ ನೀಡಬೇಕು ಎಂದರು.
ಜಿಲ್ಲಾ ಸಂಚಾಲಕ ಬನ್ನಹಳ್ಳಿ ಸೋಮಣ್ಣ ಮಾತನಾಡಿ, ಸೌಜನ್ಯ ಪ್ರಕರಣದ ಪ್ರಾಥಮಿಕ ತನಿಖಾ ವರದಿಯಲ್ಲಿ ಅತ್ಯಾಚಾರ ಮತ್ತು ಕೊಲೆ ಆಗಿರುವ ಸಾಕ್ಷ್ಯಗಳನ್ನು ಖಚಿತಪಡಿಸಲಾಗಿತ್ತು. ಆದರೆ,ಪ್ರಕರಣದ ಆರೋಪಿಯನ್ನು ಸಿಬಿಐ ನ್ಯಾಯಾಲಯ ದೋಷಮುಕ್ತ ಮಾಡಿದೆ. ಹಾಗಾದರೆ ಅಂದು ಸೌಜನ್ಯಳ ಕೊಲೆ ಮತ್ತು ಅತ್ಯಾಚಾರ ನಡೆದಿಲ್ಲವೇ ಎಂಬುದನ್ನು ಸಿಬಿಐ ನ್ಯಾಯಾಲಯ ಖಚಿತಪಡಿಸಬೇಕು. ಸಿಬಿಐ ತೀರ್ಪು ಸಂಶಯಾಸ್ಪದವಾಗಿರುವ ಕಾರಣ ಸೌಜನ್ಯ ಪ್ರಕರಣವನ್ನು ಕರ್ನಾಟಕ ಸರ್ಕಾರ ಮರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ದಸಂಸ ತಾಲೂಕು ಸಂಚಾಲಕ ಕೆಂಪಯ್ಯನಹುಂಡಿ ರಾಜು, ತಾಲೂಕು ಪ್ರಧಾನ ಸಂಚಾಲಕ ಬನ್ನಹಳ್ಳಿ ಬಸವರಾಜು, ಕಬ್ಬು ಬೆಳೆಗಾರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ರಾಜಶೇಖರ್, ಸುರೇಶ, ರಾಮು, ಮರಿಸ್ವಾಮಿ, ಮನು, ಸೋಮಣ್ಣ, ರಂಗಸ್ವಾಮಿ ಇತರರು ಪಾಲ್ಗೊಂಡಿದ್ದರು.