ಸೌಜನ್ಯ ಕೊಲೆ ಪ್ರಕರಣ: ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆಗ್ರಹ

(ಸಂಜೆವಾಣಿ ನ್ಯೂಸ್)
ಹುಬ್ಬಳ್ಳಿ,ಆ17: ದೇಶದಲ್ಲಿ ಸದ್ದು ಮಾಡುತ್ತಿರುವ ಸೌಜನ್ಯ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವನ್ನು ಕಾಣದ ಕೈಗಳು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ತಂಡ ರಚನೆ ಮಾಡಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ನೀಡಬೇಕೆಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೌಜನ್ಯ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲಾಗುತ್ತಿದೆ. ಇದರಲ್ಲಿ ಸರ್ಕಾರದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜತೆಗೆ ಕಾನೂನಿನ ಸಡಿಲಿಕೆಗಳು ಸೇರಿದಂತೆ ಇನ್ನಿತರ ಕಾರಣದಿಂದ ಬೆಳ್ತಂಗಡಿ ಭಾಗದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.
ಸೌಜನ್ಯಳನ್ನು ಅತ್ಯಾಚಾರ ಗೈದು ಕೊಲೆ ಮಾಡಲಾಗಿದ್ದು, ಈ ಪ್ರಕರಣ ಸಂಬಂಧ ಕೋರ್ಟ್ ಓರ್ವ ವ್ಯಕ್ತಿಯನ್ನು ನಿರ್ದೋಷಿ ಎಂದು ಆದೇಶ ನೀಡಿದೆ. ಅದಾಗ್ಯೂ ಕೂಡಾ ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಕೆಲವರು ಮಾಡಿದ್ದು, ಸೌಜನ್ಯಳ ಕೊಲೆಯನ್ನು ಓರ್ವ ಅಲ್ಲ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ತನಿಖಾ ಅಧಿಕಾರಿಗಳ ತನಿಖೆಯನ್ನು ಮಾಡಲು ಆದೇಶವಿದ್ದರೂ ಈವರೆಗೆ ಯಾವುದೇ ಕ್ರಮವಾಗಿಲ್ಲ. ಇದು ಪೆÇೀಲಿಸ್ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದವರು ನುಡಿದರು.
ರಾಜ್ಯದಲ್ಲಿ ಸರ್ಕಾರ ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ. ಆದರೆ ಮಹಿಳೆಯ ರಕ್ಷಣೆಯಲ್ಲಿ ಸರ್ಕಾರ ಎಡುವುತ್ತಿದೆ. ಇದಕ್ಕೆ ಕಳೆದ ವಾರ 45 ಸಾವಿರ ಮಹಿಳೆಯರು ಕಾಣೆಯಾಗಿರುವುದೇ ಸಾಕ್ಷಿ. 45 ಸಾವಿರ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯಾಗಿದ್ದಾರೆ. 25 ಸಾವಿರ ಮಕ್ಕಳು ಕಾಣೆಯಾಗಿದ್ದಾರೆ. ಇದು ಆತಂಕಕಾರಿ ಬೆಳೆವಣಿಗೆ ಆಗಿದೆ. ರಾಜ್ಯದಲ್ಲಿ ಮಕ್ಕಳು ಮಹಿಳಾ ಕಲ್ಯಾಣ ಇಲಾಖೆ ಇದ್ದಾಗ್ಯೂ ಇಷ್ಟು ನಿರ್ಲಕ್ಷ್ಯ ಏಕೆ? ಎಂದು ಪ್ರಶ್ನಿಸಿದ ಅವರು ಸರ್ಕಾರ ಕೂಡಲೇ ಮಹಿಳಾ ಪಡೆ ಸಮಿತಿ ರಚನೆ ಮಾಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ ಕುಲಕರ್ಣಿ, ಅನ್ನಪ್ಪ ದಿವಟಗಿ, ಮಂಜು ಕಾಟಕರ್, ಬಸು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.