ಸೌಕರ್ಯ ಇಲ್ಲದೇ ಪರದಾಡುತ್ತಿರುವ ಚೆಕ್ ಪೋಸ್ಟ್ ಸಿಬ್ಬಂದಿಗಳು

ದುರಗಪ್ಪ ಹೊಸಮನಿ
ಲಿಂಗಸುಗೂರು.ಮೇ.೨೨-ಪಟ್ಟಣದಲ್ಲಿ ಮೂರು ಕಡೆಗಳಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. ಆದರೆ ಚೆಕ್ ಪೋಸ್ಟ್‌ನಲ್ಲಿ ನಿಯೋಜಿಸಿದ ಸಿಬ್ಬಂದಿಗಳಿಗೆ ಕನಿಷ್ಠ ಸೌಲಭ್ಯಗಳು ನೀಡದೇ ಪುರಸಭೆ ನಿರ್ಲಕ್ಷ್ಯವಹಿಸಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿ ಮಾಡಿದೆ. ಪಟ್ಟಣದಲ್ಲಿ ಅನಗತ್ಯ ತಿರುಗಾಡುವವರಿಗೆ ದಂಡ ಹಾಕಲು ಬಸವಸಾಗರ ಕ್ರಾಸ್, ಗಡಿಯಾರ ವೃತ್ತ, ಬಸ್ ನಿಲ್ದಾಣ ವೃತ್ತದಲ್ಲಿ ಒಟ್ಟು ಮೂರು ಚೆಕ್‌ಪೋಸ್ಟ್ ತೆರೆಯಲಾಗಿದೆ. ದಂಡ ವಸೂಲಿಗೆ ಎರಡು ಶಿಫ್ಟ್‌ನಲ್ಲಿ ಇಬ್ಬರು ಪೋಲಿಸ್‌ರ ಜೊತೆ ಮೂರು ಜನ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಮೇ ೧೦ರಿಂದ ಚೆಕ್ ಪೋಸ್ಟ್ ತೆರೆಯಲಾಗಿದೆ ಚೆಕ್ ಪೋಸ್ಟ್ ಸಿಬ್ಬಂದಿಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸುವಂತೆ ಪುರಸಭೆ ಮುಖ್ಯಾಧಿಕಾರಿಗಳಿಗೆ ತಹಶೀಲ್ದಾರರು ಆದೇಶ ಮಾಡಿದ್ದಾರೆ.
ಬರೀ ನೀರು ಕೊಟ್ಟ ಪುರಸಭೆ :
ಬೆಳಿಗ್ಗೆ ೬ ಗಂಟೆಯಿಂದ ಮದ್ಯಾಹ್ನ ೨ವರಿಗೆ, ಮತ್ತು ೨ಗಂಟೆಯಿಂದ ೯ ಗಂಟೆವರಿಗೆ ಪೋಲಿಸ್‌ರು ಹಾಗೂ ಶಿಕ್ಷಕರು ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರು ಕೂಡಲು ನೆರಳಿನ ವ್ಯವಸ್ಥೆ ಮತ್ತು ಕುಡಿಯಲು ನೀರಿನ ವ್ಯವಸ್ಥೆ ಬಿಟ್ಟರೆ ಉಪಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಬೆಳಿಗ್ಗೆ ೬ಗಂಟೆಯಿಂದ ರಾತ್ರಿ ೯ ಗಂಟೆಯವರಿಗೆ ಬರೀ ನೀರು ಕುಡಿದೇ ಕರ್ತವ್ಯ ನಿರ್ವಹಣೆ ಮಾಡಬೇಕಾ ಎಂಬುದು ನಿಯೋಜನೆಗೊಂಡು ಸಿಬ್ಬಂದಿಗಳು ಪ್ರಶ್ನಿಸುತ್ತಿದ್ದಾರೆ. ಇದುಲ್ಲದೆ ಅನಗತ್ಯ ತಿರುಗಾಡುವವರನ್ನು ತಡೆದು ದಂಡ ವಿಧಿಸಬೇಕಾಗುತ್ತಿದೆ ಇಂತಹ ಕೋವಿಡ್ ರೋಗದಿಂದ ತಪ್ಪಿಸಿಕೊಳ್ಳಲು ಸಿಬ್ಬಂದಿಗಳಿಗೆ ಮಾಸ್ಕ, ಸ್ಯಾನಿಟೈಸರ್ ನೀಡುವಷ್ಟು ಕನಿಷ್ಠ ಜವಬ್ದಾರಿಯನ್ನು ಪುರಸಭೆ ಅಧಿಕಾರಿಗಳು ಮರೆತಿದ್ದಾರೆ.

ಅನಗತ್ಯ ಕರ್ತವ್ಯ :
ಮೂರು ಚೆಕ್‌ಪೋಸ್ಟ್‌ಗಳಲ್ಲಿ ಶಿಕ್ಷಕರನ್ನು ನಿಯೋಜನೆ ಮಾಡಿರುವುದು ಎಲ್ಲಡೆ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನಲ್ಲಿ ಅದರಲ್ಲೂ ಪಟ್ಟಣದಲ್ಲಿ ಪ್ರಾಥಮಿಕ, ಪ್ರೌಡಶಾಲೆ, ಅನುದಾನಿತ ಶಾಲೆಗಳ ಶಿಕ್ಷಕರ ಸಂಖ್ಯೆ ಹೆಚ್ಚಿದೆ ಆದರೂ ಕೇವಲ ೧೨ ಜನರಿಗೆ ಕರ್ತವ್ಯ ನಿಯೋಜನೆ ಮಾಡಿದ್ದಾರೆ. ಲಾಕ್‌ಡೌನ್ ಮುಗಿಯುವರಿಗೂ ೧೨ ಶಿಕ್ಷಕರಿಗೆ ದಂಡ ವಸೂಲಿಯ ಶಿಕ್ಷೆ ವಿಧಿಸಿದಂತಾಗಿದೆ. ತಾಲೂಕು ಆಡಳಿತ ನಮಗೆ ಚೆಕ್ ಪೋಸ್ಟ್ ಕರ್ತವ್ಯ ನಿಯೋಜನೆ ಮಾಡಿದೆ ಆದರೆ ಯಾವ ಉದ್ದೇಶಕ್ಕೆ ನಿಯೋಜನೆ ಮಾಡಿದ್ದಾರೋ ನಮಗೆ ಗೊತ್ತಿಲ್ಲ, ತಾಲೂಕು ಆಡಳಿತಕ್ಕೆ ಬರೀ ೧೨ ಜನ ಶಿಕ್ಷಕರೇ ಕಾಣುತ್ತಿದ್ದಾರೆ. ಉಳಿದವರು ಕಾಣುತ್ತಿಲ್ಲ, ಮೇಲಾಗಿ ನೀರು ಬಿಟ್ಟರೆ ಉಪಹಾರ, ಊಟ, ಸ್ಯಾನಿಟೈಸರ್ ವ್ಯವಸ್ಥೆಯಿಲ್ಲದೆ ನಾವು ಕರ್ತವ್ಯ ನಿಭಾಯಿಸಬೇಕಾಗಿದೆ ಎಂದು ಹೇಸರಳಿದ ಇಚ್ಛಿಸಿದ ಶಿಕ್ಷಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.