
ಸಂಜೆವಾಣಿ ವಾರ್ತೆ
ಹೂವಿನಹಡಗಲಿ ,ಸೆ.8-: ಪ್ರೌಢಶಾಲಾ ತಾಲೂಕು ಮಟ್ಟದ ಪ್ರೌಢಶಾಲಾ ಕಬಡ್ಡಿ ಪಂದ್ಯಾವಳಿಯಲ್ಲಿ ತಾಲೂಕಿನ ಸೋವೇನಹಳ್ಳಿ ಎಂ.ಎಂ.ಜಿ.ಪ್ರೌಢಶಾಲೆಯ ಬಾಲಕರ ತಂಡ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಜಿಪಿಜಿ ಸಪಪೂ ಕಾಲೇಜು ತಂಡ ದ್ವಿತೀಯ ಸ್ಥಾನ ಗಳಿಸಿದೆ.
ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಗಳು ಜರುಗಿದವು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಸರ್ವೋದಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಕೋಡಿಹಳ್ಳಿ ಮುದುಕಪ್ಪ ಬಹುಮಾನ ವಿತರಿಸಿ ಮಾತನಾಡಿ, ದೈಹಿಕ, ಮಾನಸಿಕವಾಗಿ ಸದೃಢಗೊಳ್ಳಲು ಕ್ರೀಡೆಗಳು ಸಹಕಾರಿಯಾಗಿವೆ. ದೇಸಿ ಕ್ರೀಡೆಗಳಾದ ಖೋಖೋ, ಕಬಡ್ಡಿ ಆಟಗಳಲ್ಲಿ ಯುವಕರು ಒಲವು ಬೆಳೆಸಿಕೊಂಡು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬೇಕು. ಗ್ರಾಮೀಣ ಕ್ರೀಡೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಬೇಕು ಎಂದು ಹೇಳಿದರು.
ಉಪ ಪ್ರಾಚಾರ್ಯ ಪಿ.ಪ್ರಕಾಶ್ ಮಾತನಾಡಿ, ಕ್ರೀಡೆಗಳನ್ನು ಸಂಘಟಿಸುವಲ್ಲಿ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದರು.
ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಸೋವೇನಹಳ್ಳಿಯ ಎಂ.ಎಂ.ಜಿ. ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿತು. ಜಿ.ಪಿ.ಜಿ. ಪಪೂ ಕಾಲೇಜು ತಂಡ ದ್ವಿತೀಯ ಸ್ಥಾನ ಪಡೆಯಿತು. ಎಎಸ್‍ಐ ಬಿ.ಎಸ್.ವಾಸು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.
ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಫಿ ಖವಾಸ್, ಗೌರವಾಧ್ಯಕ್ಷ ಶಿವಾನಂದಪ್ಪ, ಪಿ.ಎನ್.ಪಾಟೀಲ್, ನಾಗರಾಜ್, ಸ್ವಾಮಿನಾಥ ರಾಮಸ್ವಾಮಿ, ಕೃಷ್ಣಪ್ಪ, ರಶೀದಾ ಬೇಗಂ, ನಿವೃತ್ತ ಮುಖ್ಯ ಶಿಕ್ಷಕ ಸಿ.ಡಿ.ಲಿಂಗಶೆಟ್ಟರ್, ಜ್ಞಾನಗಂಗಾ ಪ್ರೌಢಶಾಲೆಯ ವಿಶ್ವನಾಥ್, ಇಕ್ಬಾಲ್ ಅಹಮದ್ ಇತರರು ಉಪಸ್ಥಿತರಿದ್ದರು.