ಸೋಲೊಪ್ಪಿಕೊಳ್ಳಲು ಟ್ರಂಪ್ ಹಿಂದೇಟು: ಬಿಡೆನ್

ವಾಷಿಂಗ್ಟನ್,ನ. ೭- ಅಮೇರಿಕಾ ಅಧ್ಯಕ್ಷ ಚುನಾವಣೆಯಲ್ಲಿ ತಮ್ಮ ಗೆಲವು ಶತಸಿದ್ಧ ಎಂದು ಹೇಳಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲೊಪ್ಪಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿಶ್ವವನ್ನು ಕಾಡುತ್ತಿರುವ ಅದರಲ್ಲೂ ಅಮೆರಿಕದಲ್ಲಿ ಅತಿಹೆಚ್ಚಿನ ಸೋಂಕು ಮತ್ತು ಸಾವಿಗೆ ಒಳಗಾಗಿರುವ ಕೊರೋನಾ ಸೋಂಕು ನಿಯಂತ್ರಣ ನಮ್ಮ
ಮೊದಲ ಆದ್ಯತೆ ಎಂದು ಬೀಡೆನ್ ಅವರು ತಿಳಿಸಿದ್ದಾರೆ.

ನಿರ್ಣಾಯಕ ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿ ಶ್ವೇತಭವನದ ಗಾದಿ ಹಿಡಿಯುವುದು ಬಹುತೇಕ ಖಚಿತವಾಗುತ್ತಿದ್ದಂತೆ ತಮ್ಮ ತವರು ರಾಜ್ಯ ವಿಲ್ಮಿಂಗ್ಟನ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಮೆರಿಕದ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲರ ಸಹಕಾರ ಬೇಡುವೆ ಎಂದಿದ್ದಾರೆ.

ನಾಲ್ಕೈದು ರಾಜ್ಯಗಳಲ್ಲಿ ಮತ ಎಣಿಕೆ ಪೂರ್ಣಗೊಳ್ಳುವ ತನಕ ವಿಜಯೋತ್ಸವ ಆಚರಣೆಗೆ ಮುಂದಾಗಬೇಡಿ ಗೆಲುವು ನಮ್ಮದೇ ಆನಂತರ ದೊಡ್ಡಪ್ರಮಾಣದಲ್ಲಿ ಆಚರಿಸೋಣ ಎಂದು ಪಕ್ಷದ ಅಭಿಮಾನಿಗಳು ಕಾರ್ಯಕರ್ತರಿಗೆ ೭೭ ವರ್ಷದ ಜೋ ಬೀಡೆನ್ ಮನವಿ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ರೀತಿ ಅರ್ಧಕ್ಕೂ ಹೆಚ್ಚು ರಾಜ್ಯಗಳಲ್ಲಿ ಮತ ಎಣಿಕೆ ಬಾಕಿ ಇರುವಂತೆ ತಾವು ವಿಜಯಿ ಎಂದು ಘೋಷಿಸಿಕೊಂಡಂತೆ ನಾವು ಮಾಡೋದು ಬೇಡ.. ಎಲ್ಲ ರಾಜ್ಯಗಳ ಸಂಪೂರ್ಣ ಮತ ಎಣಿಕೆ ಮುಕ್ತಾಯ ವಾಗಲಿ ಆನಂತರ ವಿಜಯೋತ್ಸವ ಆಚರಿಸೋಣ ಎಂದು ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷರಾಗಲು ೨೭೦ ಮತಗಳ ಅಗತ್ಯವಿದ್ದು ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಮುನ್ನೂರಕ್ಕೂ ಹೆಚ್ಚು ಮತಗಳು ಬರುವ ಸಾಧ್ಯತೆಗಳಿವೆ ಎಂದು ಅವರು ಹೇಳಿದ್ದಾರೆ.

ಸಮಗ್ರ ಅಭಿವೃದ್ಧಿಗೆ ಆದ್ಯತೆ:

ಅಮೆರಿಕದ ಸಮಗ್ರ ಅಭಿವೃದ್ಧಿಗೆ ನಮ್ಮ ಆದ್ಯತೆ ಎಂದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಅವರು ಹೇಳಿದ್ದಾರೆ.

ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರೀಸ್ ಅವರೊಂದಿಗೆ ಅಮೆರಿಕವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಇಬ್ಬರು ಹಗಲಿರುಳು ಶ್ರಮಿಸುವ ಅವರು ಜನತೆಗೆ ಭರವಸೆ ನೀಡಿದ್ದಾರೆ.

ದಾಖಲೆ ಮತ ಗಳಿಕೆ:

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೀಡೆನ್ ಅವರು ದಾಖಲೆಯ ಮತಗಳನ್ನು ಪಡೆದಿದ್ದಾರೆ ಇವೆಲ್ಲವೂ ಜನಪ್ರಿಯ ಮತಗಳು ಎನ್ನುವುದು ಹೆಗ್ಗಳಿಕೆ ಸಂಗತಿ.

ಅಮೆರಿಕದಲ್ಲಿ ಸರಿಸುಮಾರು ೨೪ ಕೋಟಿ ಆರೋಹ ಮತದಾರರಿದ್ದು ಆ ಪೈಕಿ೭.೪೦ ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದಾರೆ ಅಲ್ಲದೆ ಗೆಲುವಿಗೆ ಅಗತ್ಯವಿರುವ ೨೭೦ ಎಲೆಕ್ಟ್ರಾಲ್ ಮತ ಪಡೆಯುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದ್ದಾರೆ.

ಹಾಲಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಸರಿಸುಮಾರು ಏಳು ಕೋಟಿ ಮತಗಳನ್ನು ಪಡೆದಿದ್ದಾರೆ.

ಡೊನಾಲ್ಡ್ ಟ್ರಂಪ್ ಮತ್ತು ಜೋ ಬೀಡೆನ್ ನಡುವೆ ಹಲವು ರಾಜ್ಯಗಳಲ್ಲಿ ತೀವ್ರ ಪೈಪೋಟಿ ಎದುರಾಗಿದೆ ಇನ್ನೂ ಮೂರು ನಾಲ್ಕು ರಾಜ್ಯಗಳಲ್ಲಿ ಮತಎಣಿಕೆ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಮುಂದಿನ ಅಧ್ಯಕ್ಷರು ಯಾರು ಎನ್ನುವುದು ಮತ್ತು ಕುತೂಹಲ ಕೆರಳಿಸಿದೆ