ಸೋಲು-ಗೆಲುವು ನಮ್ಮ ಆಲೋಚನೆಯ ಫಲಿತಾಂಶ:ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್

ಕಲಬುರಗಿ,ಫೆ.23:ಯಾವುದೇ ವ್ಯಕ್ತಿಯ ಸೋಲು-ಗೆಲುವು ಎಂಬುದು ಆತನ ಆಲೋಚನೆಯ ನೇರ ಫಲಿತಾಂಶ ಆಗಿರುತ್ತದೆ. ಹಾಗಾಗಿ, ನಮ್ಮ ಆಲೋಚನೆಗಳು ಸದಾ ಸಕಾರಾತ್ಮಕವಾಗಿರುವಂತೆ ಎಚ್ಚರ ವಹಿಸಬೇಕಿದೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಕಿವಿಮಾತು ಹೇಳಿದರು.
ಇಲ್ಲಿನ ಕಡಗಂಚಿ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವ್ಯಕ್ತಿಯ ಜೀವನ ಮತ್ತು ನಡುವಳಿಕೆ ಅವನ ಅಂತರಂಗದ ಆಲೋಚನೆ ಹಾಗೂ ಆದರ್ಶಗಳ ಫಲಿತಾಂಶ ಆಗಿರುತ್ತದೆ ಎಂದರು.
ವಿದ್ಯಾರ್ಥಿಗಳು ತಮ್ಮ ಆಲಿಸುವಿಕೆಯ ಗುಣಮಟ್ಟ ಪರಿಣಾಮಕಾರಿ ಆಗಿರುವಂತೆ ಎಚ್ಚರ ವಹಿಸಬೇಕು. ಸಿನಿಕತನ ಎಂಬುದು ಅಂತರಂಗದ ನಿರಾಶಾವಾದಿ ದನಿಯಾಗಿದ್ದು, ನಮ್ಮಲ್ಲಿ ಹಿಂಜರಿಕೆ ಭಾವ ಸೃಷ್ಟಿಸುತ್ತದೆ. ಹಾಗಾಗಿ, ವಿದ್ಯಾರ್ಥಿಗಳು ತಮ್ಮಲ್ಲಿ ಸಿನಿಕತನಕ್ಕೆ ಅವಕಾಶ ನೀಡಬಾರದು. ಸಿನಿಕತನ ಆಲಿಸುವಿಕೆಯ ಗುಣಮಟ್ಟವನ್ನೇ ಹೊಸಕಿ ಹಾಕುತ್ತದೆ ಎಂದು ಸಲಹೆ ನೀಡಿದರು.
ಬೀಜದಿಂದ ಸಸ್ಯ ಬೆಳೆಯುವಂತೆ ಮನುಷ್ಯನ ಪ್ರತಿಯೊಂದು ಕ್ರಿಯೆ ಅವನಲ್ಲಿ ಹುದುಗಿದ ವಿಚಾರಗಳ ಬೀಜದಿಂದ ಅಂಕುರಿಸುತ್ತದೆ. ಬೀಜವಿಲ್ಲದೆ ಹೇಗೆ ಸಸ್ಯ ಇರುವುದಿಲ್ಲವೋ, ಅದೇ ರೀತಿ ಆಲೋಚನೆಗಳಿಲ್ಲದೆ ವ್ಯಕ್ತಿತ್ವ ನಿರ್ಮಾಣ ಆಗಲಾರದು ಎಂದು ನುಡಿದರು.
ಹೃದಯ ಮತ್ತು ಮನಸ್ಸಿನಲ್ಲಿ ನಿಯಮಬದ್ಧ ಗುರಿ ಹಾಗೂ ಉದ್ದೇಶಗಳನ್ನು ಇಟ್ಟುಕೊಂಡು ಆಲೋಚನೆಗಳ ಮೇಲೆ ಗುರಿ ಮತ್ತು ಉದ್ದೇಶ ಕೇಂದ್ರೀಕರಿಸಿದರೆ ನಮ್ಮ ಆಲೋಚನೆಗಳು ಗಟ್ಟಿಗೊಳ್ಳುತ್ತಾ ಹೋಗುತ್ತವೆ. ಆಗ ನಿಶ್ಚಿತವಾಗಿ ಉದ್ದೇಶಿತ ಗುರಿ ತಲುಪುವುದು ಸುಲಭವಾಗುತ್ತದೆ ಎಂದು ಪ್ರತಿಪಾದಿಸಿದರು.
ನಂಬಿಕೆ ಮತ್ತು ಆಲೋಚನಾ ಕ್ರಮದಲ್ಲಿ ಹೊಸ ಕ್ರಾಂತಿ ಹುಟ್ಟು ಹಾಕುವುದರ ಮೂಲಕ ವೈಯಕ್ತಿಕವಾಗಿ ನಮ್ಮಲ್ಲಿ ಮತ್ತು ರಾಷ್ಟ್ರದ ಶ್ರೇಷ್ಠತೆ ಹಾಗೂ ಪರಿವರ್ತನೆ ಸಾಧಿಸುವುದು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಸಿಯುಕೆ ಉಪಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ಆರಂಭದಲ್ಲಿ ವಿಶ್ವವಿದ್ಯಾಲಯದ ಪ್ರಗತಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಆರ್.ಆರ್.ಬಿರಾದಾರ ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾ ಸಾಯಿಕೃಷ್ಣ ವೇದಿಕೆಯಲ್ಲಿದ್ದರು.
ಡಾ.ಅಂಕಿತಾ ಸತ್ಪತಿ ಹಾಗೂ ಕನ್ನಡ ಪ್ರಾಧ್ಯಾಪಕ ಬಸವರಾಜ ಕೊಡಗುಂಟಿ ನಿರೂಪಿಸಿದರು.
ಘಟಿಕೋತ್ಸವ ಸಮನ್ವಯಾಧಿಕಾರಿ ಪೆÇ್ರ.ಮೊಹ್ಮದ್ ಝೋಹೆರ್, ಸಿಯುಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಗಣಪತಿ ಸಿನ್ನೂರ, ಡಾ.ವಿಕ್ರಮ್ ವಿಸಾಜಿ, ಪೆÇ್ರ.ಪುಷ್ಪಾ ಎಂ.ಸವದತ್ತಿ, ಪೆÇ್ರ.ಮೊಹ್ಮದ್ ಅಸ್ಲಂ, ಡಾ.ಭರತಕುಮಾರ್, ಡಾ. ಅಪ್ಪಗೆರೆ ಸೋಮಶೇಖರ ಸೇರಿದಂತೆ ವಿವಿಧ ನಿಕಾಯಗಳ ಮುಖ್ಯಸ್ಥರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


42 ಚಿನ್ನದ ಪದಕ, 49 ಪಿಎಚ್‍ಡಿ ಪದವಿ ಪ್ರದಾನ
ಸಿಯುಕೆ ಏಳನೇ ಘಟಿಕೋತ್ಸವದಲ್ಲಿ 296 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 347 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ ನಾಲ್ವರು ಅಭ್ಯರ್ಥಿಗಳು ಎಂ.ಫಿಲ್ ಮತ್ತು 49 ವಿದ್ಯಾರ್ಥಿಗಳಿಗೆ ಪಿಎಚ್‍ಡಿ ಪದವಿ ಪ್ರದಾನ ಮಾಡಲಾಯಿತು.
ಇದೇ ವೇಳೆ, ಘಟಿಕೋತ್ಸವದಲ್ಲಿ 42 ವಿದ್ಯಾರ್ಥಿಗಳು ತಮ್ಮ ಸರ್ವೋತ್ಕøಷ್ಟ ಸಾಧನೆಗಾಗಿ ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಈ ಪೈಕಿ, 29 ವಿದ್ಯಾರ್ಥಿಗಳು ಸ್ನಾತಕೋತ್ತರ, 12 ವಿದ್ಯಾರ್ಥಿಗಳು ಸ್ನಾತಕ ಪದವಿಯಲ್ಲಿ ತಲಾ ಒಂದು ಚಿನ್ನದ ಪದಕ ಪಡೆದರು. ಇನ್ನು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಎಂ.ಟೆಕ್ ಪದವಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಬಾವಿಕಡಿ ದಿವ್ಯಾಜ್ಞ ಪೆÇ್ರ.ಎ.ಎಂ.ಪಠಾಣ್ ಚಿನ್ನದ ಪದಕ ಸ್ವೀಕರಿಸಿದರು.


ಸರ್ವೋತ್ಕೃಷ್ಟ ಸಾಧನೆಗೆ ಸಂದ ಚಿನ್ನ
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಏಳನೇ ಘಟಿಕೋತ್ಸವದಲ್ಲಿ ತಮ್ಮ ಸರ್ವೋತ್ಕೃಷ್ಟ ಸಾಧನೆಯ ಮೂಲಕ ಇಬ್ಬರು ವಿದ್ಯಾರ್ಥಿನಿಯರು ಚಿನ್ನದ ಪದಕ ಪಡೆಯುವ ಮೂಲಕ ಗಮನ ಸೆಳೆದರು.ಇತಿಹಾಸ ಮತ್ತು ಪುರಾತತ್ವ ವಿಭಾಗದ ವಿದ್ಯಾರ್ಥಿನಿ ಅತೀರಾ ಪಿ.ಎನ್ ಚಿನ್ನದ ಪದಕ ಪಡೆದಿದ್ದು, ಈಕೆ ಕೇರಳದ ವಯನಾಡಿನ ಪೌರಕಾರ್ಮಿಕ ನಾರಾಯಣ ಅವರ ಪುತ್ರಿ.
ಇನ್ನು, 2021-2023ನೇ ತಂಡದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ವಿಷಯದಲ್ಲಿ (ಎಂ.ಟೆಕ್) ಸ್ನಾತಕೋತ್ತರ ಪದವಿ ಮಾಡಿರುವ ವಿದ್ಯಾರ್ಥಿನಿ ಬಾವಿಕಡಿ ದಿವ್ಯಾಜ್ಞ ಶೇ.96.80 ಅಂಕಗಳನ್ನು ಪಡೆಯುವ ಮೂಲಕ ಎ.ಎಂ.ಪಠಾಣ್ ಚಿನ್ನದ ಪದಕ ಪಡೆದರು. ಪ್ರಸ್ತುತ ಈ ವಿದ್ಯಾರ್ಥಿನಿ ಅರಿಝೋನಾ ಸ್ಟೇಟ್ ಯೂನಿವರ್ಸಿಟಿಯ ಕಂಪ್ಯೂಟರ್ ಇಂಜಿನಿಯರಿಂಗ್ ವಿಭಾಗದಲ್ಲಿ (2022-2026) ಪಿಎಚ್‍ಡಿ ಪದವಿಗಾಗಿ ಸಂಶೋಧನಾ ಅಧ್ಯಯನ ನಡೆಸುತ್ತಿದ್ದಾರೆ.


ಬೋಧನೆ ಪವಿತ್ರ ಕಾರ್ಯ
ಬೋಧನೆ ಎಂಬುದು ಅತ್ಯಂತ ಪವಿತ್ರ ಹಾಗೂ ಮನಸ್ಸಿಗೆ ಹಿಡಿಸುವ ಕಾರ್ಯ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನುಡಿದರು.ವಕೀಲ ವೃತ್ತಿಯ ಜೊತೆಗೆ ತಾವು ನ್ಯಾಯಶಾಸ್ತ್ರ ಬೋಧನೆಯ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ದಿನಗಳನ್ನು ಅವರು ಸ್ಮರಿಸಿದರು.
ಉಪನ್ಯಾಸಕ ಜೀವನದ ದಿನಗಳಲ್ಲಿ ಭೇಟಿಯಾದ ಶಿಕ್ಷಣತಜ್ಞರ ಜೊತೆಗಿನ ಚರ್ಚೆಗಳಿಂದ ಬೋಧನೆಯ ಕುರಿತು ಮತ್ತಷ್ಟು ಸೆಳೆತ ಆರಂಭಗೊಂಡಿತು. ಇದಾದ ಬಳಿಕ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದ ದಿನಗಳಲ್ಲಿ ಭೂಪಾಲ್ ನ್ಯಾಷನಲ್ ಜುಡಿಷಿಯಲ್ ಅಕಾಡೆಮಿಯಲ್ಲಿ ನಿರರ್ಗಳವಾಗಿ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಉಪನ್ಯಾಸಗಳನ್ನು ನೀಡಲು ಇದರಿಂದ ಸಹಾಯವಾಯಿತು ಎಂದರು. ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಕರ್ತವ್ಯಲೋಪ ಮತ್ತು ಭ್ರಷ್ಟಾಚಾರ ಕುರಿತು ಪ್ರಸ್ತಾಪಿಸಿದ ಅವರು, ಸ್ವಾರ್ಥ ಮತ್ತು ಅತಿಯಾದ ದುರಾಸೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡುತ್ತಿದೆ. ಇದು ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಅಭಿವೃದ್ಧಿಗೆ ಬಳಸಬೇಕಾದ ಶೇ.50ರಷ್ಟು ಹಣ ಭ್ರಷ್ಟಾಚಾರದ ಕಾರಣಕ್ಕೆ ಸೋರಿಕೆಯಾಗುತ್ತಿದೆ ಎಂದು ವಿಷಾದಿಸಿದರು.ಸಕಾರಾತ್ಮಕ ಚಿಂತನೆಗಳಿಂದ ಮಾತ್ರ ಭ್ರಷ್ಟಾಚಾರಿ ಮನಸ್ಥಿತಿಯಿಂದ ಆಚೆ ಬರಲು ಸಾಧ್ಯ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬದಲಾವಣೆಗಾಗಿ ಕ್ರಾಂತಿಯ ಚಿಂತನೆ ರೂಪುಗೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಆಪ್ತ ಸಲಹೆ ನೀಡಿದರು.