ಹುಬ್ಬಳ್ಳಿ,ಏ26: ಮೇ.10 ರಂದು ಜನತೆಯಿಂದ ಸೋಲು-ಗೆಲುವು ನಿರ್ಧಾರ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಕೇವಲ ಹುಬ್ಬಳ್ಳಿಗೆ ಮಾತ್ರ ಸೀಮಿತವಲ್ಲ, ರಾಜ್ಯದ ಸೆಂಟ್ರಲ್ ಕ್ಷೇತ್ರವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಬೇಕೆಂಬ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಬಿ.ಎಸ್.ಯಡಿಯೂರಪ್ಪ ಕೂಡಾ ಪ್ರಮುಖರ ಸಭೆ ನಡೆಸಿ ನನ್ನ ಸೋಲಿಸಲು ಆಂದೋಲನ ನಡೆಸಿದ್ದಾರೆ. ಯಾಕಿಷ್ಟು ಬಡಪಾಯಿ ಶೆಟ್ಟರ್‍ಗೆ ಸೋಲಿಸುವ ಗುರಿಯನ್ನು ಬಿಜೆಪಿ ಮಾಡಿಕೊಂಡಿದೆ ಗೊತ್ತಾಗುತ್ತಿಲ್ಲ ಎಂದರು.
ಈ ಹಿಂದೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದಾಗಲೇ ತತ್ವಸಿದ್ದಾಂತಗಳು ಮಣ್ಣುಪಾಲು ಆಗಿವೆ. ಹೀಗಾಗಿ ಇದೀಗ ನನ್ನ ಕುರಿತು ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಕಿಡಿಕಾರಿದರು.
ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿಯನ್ನು ಒಡೆದು ಕೆಜಿಪಿ ಪಕ್ಷ ಕಟ್ಟಿದ್ದರು. ಆಗ ಅವರ ತತ್ವಸಿದ್ದಾಂತ ಎಲ್ಲಿಗೆ ಹೋಗಿತ್ತು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ಮತ್ತೊಬ್ಬ ಲಿಂಗಾಯತ ನಾಯಕರ ವಿರುದ್ಧ ಟೀಕೆ ಮಾಡಿಸಲಾಗುತ್ತಿದೆ. ಈ ಮೂಲಕ ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಬಿ.ಎಲ್.ಸಂತೋಷ ಅವರಿಗೆ ತಿರುಗೇಟು ನೀಡಿದರು.
ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿದ್ದಾರೆ. ಅಪರಾಧಿ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಹಿರಿತನಕ್ಕೆ ಬೆಲೆ ಕೊಡದೇ ಟಿಕೆಟ್ ಕೈತಪ್ಪಿಸಿದ್ದು ಸ್ವಾಭಿಮಾನಕ್ಕೆ ದಕ್ಕೆ ತರಲಾಯಿತು. ಈ ದಿಸೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಈ ಬಾರಿ ಅತ್ಯಧಿಕ ಮತಗಳನ್ನು ಪಡೆದು ಗೆದ್ದು ಬರಲಿದ್ದೇನೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಸ್ತುವಾರಿಗಳಾದ ರೋಹನ್ ಗುಪ್ತ, ಮುಖಂಡರಾದ ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ, ಮಲ್ಲಿಕಾರ್ಜುನ ಸಾಹುಕಾರ, ನಾಗೇಶ ಕಲಬುರಗಿ ಇದ್ದರು.