ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸಿ

ಕೋಲಾರ, ಜು.೨೯: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದ್ದು, ಖುಷಿಯಿಂದ ಆಟವಾಡಿ, ದ್ವೇಷ ಬಿಡಿ ಶಾಸಕ ಕೆ.ಶ್ರೀನಿವಾಸಗೌಡ ಕರೆ ನೀಡಿದರು.
ತಾಲ್ಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ವೇಮಗಲ್ ಹೋಬಳಿ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಗೆಲುವು ಜವಾಬ್ದಾರಿ ಹೆಚ್ಚಿಸುತ್ತದೆ, ಸೋಲು ಆದತಪ್ಪುಗಳನ್ನು ಸರಿಪಡಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತದೆ ಎಂದ ಅವರು, ಮಕ್ಕಳು ಸ್ನೇಹಪೂರ್ವಕವಾಗಿ ಕ್ರೀಡೆಗಳಲ್ಲಿ ಭಾಗವಹಿಸಬೇಕು, ದ್ವೇಷ,ಅಸೂಯೆಗೆ ಅವಕಾಶವಿಲ್ಲ ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ದೇವರಾಜ್ ಮಾತನಾಡಿ, ಶಿಕ್ಷಣದ ಜತೆಗೆ ಕ್ರೀಡೆ ಅಗತ್ಯವಿದೆ, ಉತ್ತಮ ಆರೋಗ್ಯವಿರುವ ದೇಹದಲ್ಲಿಆರೋಗ್ಯಕರ ಮನಸ್ಸು ಇರುತ್ತದೆ ಎಂದ ಅವರು ಕ್ರೀಡೆಗಳು ಶಿಕ್ಷಣದ ಅವಿಭಾಜ್ಯ ಅಂಗ ಎಂದು ತಿಳಿಸಿದರು.
ಕ್ರೀಡೆಯನ್ನು ಕ್ರೀಡೆ ಎಂದೇ ಸ್ವೀಕರಿಸಿ, ಸವಾಲು ಬೇಡ, ತೀರ್ಪುಗಾರರು ನೀಡುವ ತೀರ್ಪು ಗೌರವಿಸಿ, ಎರಡು ದಿನಗಳ ಕಾಲ ಸಂಭ್ರಮದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಾಧಕರಾಗಿ ಶಾಲೆಗಳಿಗೆ ತೆರಳಿ ಎಂದು ಕಿವಿಮಾತು ಹೇಳಿದರು.
ಅನೇಕ ಪೋಷಕರು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದಿಲ್ಲ, ಕೇವಲ ಅಂಕಗಳಿಗೆ ಮಾತ್ರ ಮಕ್ಕಳಿಗೆ ಒತ್ತಡ ಹಾಕುತ್ತಾರೆ ಎಂದು ವಿಷಾದಿಸಿ, ಮಕ್ಕಳನ್ನು ಕ್ರೀಡೆಗಳಿಗೂ ಪ್ರೋತ್ಸಾಹಿಸುವ ಮನಸ್ಥಿತಿ ಅಗತ್ಯ ಎಂದರು.
ಜಿಲ್ಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಂ.ಚಂದ್ರಪ್ಪ ಮಾತನಾಡಿ, ಕೋವಿಡ್‌ನಿಂದಾಗಿ ಕಳದೆರಡು ವರ್ಷಗಳಿಂದ ಕ್ರೀಡೆಗಳಿಗೆ ಅವಕಾಶ ತಪ್ಪಿ ಹೋಗಿತ್ತು, ಇದೀಗ ಅವಕಾಶ ಲಭ್ಯವಾಗಿದೆ, ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದ ಅವರು, ತೀರ್ಪುಗಾರರು ನಿಷ್ಪಕ್ಷಪಾತ ತೀರ್ಪಿನ ಮೂಲಕ ಮಕ್ಕಳಿಗೆ ಅನ್ಯಾಯವಾಗದಂತೆ ಎಚ್ಚರವಹಿಸಬೇಕು ಎಂದರು.
ಕ್ಯಾಲನೂರು ಕೆಪಿಎಸ್ ಶಾಲೆ ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್ ಸ್ವಾಗತಿಸಿ,ನಿರೂಪಿಸಿದ ಕಾರ್ಯಕ್ರಮದಲ್ಲಿ ವೇಮಗಲ್ ವೃತ್ತ ನಿರೀಕ್ಷಕ ಶಿವರಾಜ್, ಮುಖಂಡ ಸಿ.ಡಿ.ರಾಮಚಂದ್ರೇಗೌಡ, ರಾಜ್ಯ ದೈಹಿಕಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಚೌಡಪ್ಪ, ಜಿಲ್ಲಾಧ್ಯಕ್ಷ ವಿ.ಮುರಳಿಮೋಹನ್, ಸಹಶಿಕ್ಷಕರ ಸಂಘದ ಅಧ್ಯಕ್ಷ ಶಿವಕುಮಾರ್, ಕ್ಯಾಲನೂರು ಎಸ್‌ಡಿಎಂಸಿ ಅಧ್ಯಕ್ಷರು,ಉಪಾಧ್ಯಕ್ಷರು, ಗ್ರಾ.ಪಂ ಅಧ್ಯಕ್ಷರು,ಸದಸ್ಯರು, ವಿವಿಧ ಶಾಲೆಗಳ ಮುಖ್ಯಶಿಕ್ಷಕರು, ಪದಾಧಿಕಾರಿಗಳು, ಮುಖ್ಯಶಿಕ್ಷಕರು ಉಪಸ್ಥಿತರಿದ್ದರು.