
ಕಲಬುರಗಿ,ಫೆ 24: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ,ಜನರ ಮನಗೆಲ್ಲಲು, ಕೆಕೆಆರ್‍ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು ಕಲ್ಯಾಣ ಕರ್ನಾಟಕ ಉತ್ಸವ ಆಯೋಜಿಸಿದ್ದಾರೆ ಎಂದು ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಅವರು ಹರಿಹಾಯ್ದಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಇದು ಕಲ್ಯಾಣ ಕರ್ನಾಟಕ ಉತ್ಸವ ಅಲ್ಲ. ದತ್ತಾತ್ರೆಯ ಪಾಟೀಲ ರೇವೂರ ಉತ್ಸವ.ಇದು ಚುನಾವಣೆ ಉದ್ದೇಶದ ರಾಜಕೀಯ ಉತ್ಸವ ಎಂದು ಟೀಕಿಸಿದ್ದಾರೆ.
ಜಿಲ್ಲೆಯಲ್ಲಿ ತೊಗರಿ ಬೆಳೆ ನಾಶದಿಂದ ರೈತರು ಕಂಗಾಲಾಗಿದ್ದಾರೆ.ಅವರಿಗೆ ಸಮರ್ಪಕ ಪರಿಹಾರ ಸಿಕ್ಕಿಲ್ಲ.ಇಂತಹ ಕಠಿಣ ಸಂದರ್ಭದಲ್ಲಿ 5, 6 ಕೋಟಿರೂ. ಖರ್ಚು ಮಾಡಿ ಉತ್ಸವ ಆಚರಿಸಲು ಮುಂದಾಗಿದ್ದು ನಾಚಿಕೆಗೇಡು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬಿಜೆಪಿ ಹೊರತಾಗಿ ಅನ್ಯ ಪಕ್ಷದವರು ಸದಸ್ಯರಿದ್ದು, ಅವರನ್ನು ಉತ್ಸವದ ವಿಷಯದಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಯಾವ ಮೀಟಿಂಗಿಗೂ ಅವರನ್ನು ಕರೆದಿಲ್ಲ.ಉತ್ಸವದ ಪೋಸ್ಟರ್ ಮತ್ತು ಕಟೌಟ್‍ಗಳಲ್ಲಿ ಇತರರನ್ನು ಕಡೆಗಣಿಸಿ ದತ್ತಾತ್ರೇಯ ಪಾಟೀಲ ರೇವೂರ ಅವರು ಕೇವಲ ತಮ್ಮ ಭಾವಚಿತ್ರ ಹಾಕಿಸಿಕೊಂಡಿದ್ದಾರೆ.ಪೋಸ್ಟರ್ ಗಳಲ್ಲಿ ಕನ್ನಡ ಬಾವುಟವನ್ನು ತಲೆತಿರುಗಾಗಿ ಹಾಕಿ ಕನ್ನಡಕ್ಕೆ ಅವಮಾನಿಸಲಾಗಿದೆ.ಉತ್ಸವದಲ್ಲಿ ಪಾಲ್ಗೊಳ್ಳಲು ಸರಿಯಾದ ಪಾಸ್ ವಿತರಿಸಿಲ್ಲ. ಪಾಲಿಕೆ ಸದಸ್ಯರಂತಹ ಜನಪ್ರತಿನಿಧಿಗಳನ್ನು ಸಹ ಕಡೆಗಣಿಸಲಾಗಿದೆ. ಉತ್ಸವದಲ್ಲಿ ಊಟದ ವ್ಯವಸ್ಥೆ ಸರಿ ಇಲ್ಲ ಎಂದು ಕೇಳಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಮುಂದಿನ ಚುನಾವಣೆಯಲ್ಲಿ ದತ್ತಾತ್ರೆಯ ಪಾಟೀಲ ರೇವೂರ ಅವರ ಸೋಲು ಕಟ್ಟಿಟ್ಟ ಬುತ್ತಿ ಎಂದು ಕೃಷ್ಣಾ ರೆಡ್ಡಿ ಅವರು ಹೇಳಿದ್ದಾರೆ.