ಸೋಲಿಲ್ಲದ ಸರದಾರನಿಗೆ ಮಂತ್ರಿ ಭಾಗ್ಯ

ಆರು ದಶಕದ ಇತಿಹಾಸದಲ್ಲಿ ಸುಳ್ಯಕ್ಕೆ ಮೊದಲ ಬಾರಿಗೆ ಸಚಿವ ಪಟ್ಟ
ಸುಳ್ಯ : ಈ ಹಿಂದೆ ಹಲವು ಬಾರಿ ಸಚಿವ ಸಂಪುಟ ರಚನೆ, ವಿಸ್ತರಣೆ, ಪುನರ್ ರಚನೆಯ ಸಂದರ್ಭದಲ್ಲೆಲ್ಲ ಸುಳ್ಯ ಶಾಸಕ ಅಂಗಾರರಿಗೆ ಸಚಿವ ಸ್ಥಾನಕ್ಕೆ ’ನೋ’ ಎನ್ನಲಾಗಿತ್ತು. ಆದರೆ ಈ ಬಾರಿ ತನ್ನ ಹೆಸರಿನಂತೆ ಸಚಿವ ಸ್ಥಾನಕ್ಕೆ ಅವರು ಎಸ್.ಅಂಗಾರ. ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರತಿನಿಧಿಗೆ ಇದು ಮೊದಲ ಬಾರಿಗೆ ದೊರೆಯುತ್ತಿರುವ ಪ್ರಾತಿನಿಧ್ಯ. ಹಾಗಾಗಿ ಎಸ್.ಎಂಗಾರರ ಮೂಲಕ ಸುಳ್ಯವೂ ಇತಿಹಾಸ ಬರೆಯುತ್ತಿದೆ.
ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆಯ ಬಡ ಕುಟುಂಬದಲ್ಲಿ ಚನಿಯ ಮತ್ತು ಹುಕ್ರು ದಂಪತಿಯ ಪುತ್ರರಾಗಿ ಜನಿಸಿದ ಅಂಗಾರರು ೯ ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದರು. ಬಡತನದ ಕಾರಣದಿಂದ ಮುಂದೆ ಓದಲಾಗಲಿಲ್ಲ. ಕೂಲಿ ಕಾರ್ಮಿಕರಾಗಿ ದುಡಿಯತೊಡಗಿದರು.
ಆವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂಟು ಹೊಂದಿದ್ದ ಅಂಗಾರರು, ಬಳಿಕ ಬಿಜೆಪಿಯಲ್ಲೂ ಸಕ್ರಿಯರಾದರು. ಸುಳ್ಯ ತಾಲೂಕು ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡು ಕ್ಷೇತ್ರದುದ್ದಕ್ಕೂ ಸಂಚರಿಸಿ ಪಕ್ಷ ಸಂಘಟನೆಯ ಜೊತೆಗೆ ಕ್ಷೇತ್ರವನ್ನು ಪೂರ್ಣವಾಗಿ ಪರಿಚಯ ಮಾಡಿಕೊಳ್ಳುವಲ್ಲಿಯೂ ಯಶಸ್ವಿಯಾದರು.
೧೯೮೯ರಲ್ಲಿ ವಿಧಾನ ಸಭೆ ಚುನಾವಣೆ ನಡೆದಾಗ ಬಿಜೆಪಿಯಲ್ಲಿ ಅಭ್ಯರ್ಥಿತನಕ್ಕೆ ಹೆಸರು ಬಂದದ್ದು ಅಂಗಾರ ಅವರದು. ಹಾಗೆ ಪ್ರಥಮವಾಗಿ ಚುನಾವಣೆಗೆ ಧುಮುಕಿದ ಅವರು ಕಾಂಗ್ರೆಸ್ಸಿನ ಕೆ.ಕುಶಲ ಅವರ ಎದುರು ೫೮೪೦ ಮತಗಳಿಂದ ಪರಾಭವಗೊಂಡರು.
ಮುಂದಿನ ೧೯೯೬ರ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಅಲ್ಲಿಂದ ಆರಂಭಗೊಂಡ ವಿಜಯಮಾಲೆ ೨೦೧೮ರವರೆಗೂ ಮುಂದುವರಿದಿದೆ. ೧೯೯೪ರಲ್ಲಿ ಎಸ್.ಅಂಗಾರರು ಕಾಂಗ್ರೆಸ್ಸಿನ ಕೆ.ಕುಶಲ ಅವರನ್ನು ೧೫೦೪೪ ಮತಗಳಿಂದ ಸೋಲಿಸಿದರು. ೧೯೯೯ರ ಚುನಾವಣೆಯಲ್ಲಿ ಮತ್ತೆ ಕುಶಲರನ್ನು ೬೯೯೭ ಮತಗಳಿಂದ ಪರಾಭವಗೊಳಿಸಿದರು.೨೦೦೪ರಿಂದ ಈ ಕ್ಷೇತ್ರದಲ್ಲಿ ಅಂಗಾರ ಹಾಗೂ ಡಾ. ರಘು ಅವರ ನಡುವೆ ನೇರ ಮುಖಾಮುಖಿ ಏರ್ಪಟ್ಟಿತು. ೨೦೦೪ರ ಚುನಾವಣೆಯಲ್ಲಿ ಅಂಗಾರರು ಡಾ.ರಘು ಅವರನ್ನು ೧೭೦೮೫ ಮತಗಳಿಂದ ಮಣಿಸಿದರು. ೨೦೦೯ರ ಚುನಾವಣೆಯಲ್ಲಿ ೪೩೨೨ಮತಗಳಿಂದ ಸೋಲಿಸಿದರು. ೨೦೧೩ರ ಚುನಾವಣೆಯಲ್ಲಿ ೧೨೭೩ ಮತಗಳಿಂದ ಸೋಲಿಸಿದರು. ಕಳೆದ ಬಾರಿಯ ಮುಖಾಮುಖಿಯಲ್ಲಿ ೨೬೦೬೯ ಮತಗಳ ಅಂತರದಿಂದ ಸೋಲಿಸುವ ಮೂಲಕ ಸುಳ್ಯ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ತನ್ನ ಪ್ರಭುತ್ವ ಸ್ಥಾಪಿಸಿದೆ.
ಅಂಗಾರರು ಸಣ್ಣ ಪ್ರಾಯದಲ್ಲಿಯೇ ಇಷ್ಟು ಬಾರಿ ನಿರಂತರವಾಗಿ ಗೆದ್ದುದು ಒಂದು ದಾಖಲೆಯಾದರೆ, ಸ್ಪರ್ಧಿಸಿದ ಚುನಾವಣೆಗಳಲ್ಲಿ ಅತೀ ಹೆಚ್ಚು ಅಂತರದಿಂದ ೨೦೧೮ರಲ್ಲಿ ಗೆದ್ದಿರುವುದು ಕೂಡಾ ದಾಖಲೆ.
ತನ್ನ ಶಾಸಕತ್ವದ ಅವಧಿಯಲ್ಲಿ ಅವರು ಹಲವು ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಅನೇಕ ಯೋಜನೆಗಳನ್ನು ಅನುದಾನಗಳನ್ನು ಸ್ವ ಕ್ಷೇತ್ರಕ್ಕೆ ಮಂಜೂರುಗೊಳಿಸುವಲ್ಲಿ ಪರಿಶ್ರಮಿಸಿದ್ದಾರೆ.
ವಿಧಾನ ಮಂಡಲದ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದ ಅವರು ಹಿಂದುಳಿದ ವರ್ಗಗಳ ವಸತಿ ನಿಲಯ ಮಂಜೂರು, ಪಿ.ಡಬ್ಲುಡಿ ಉಪವಿಭಾಗ ಸ್ಥಾಪನೆ, ಸುಳ್ಯ ಹಾಗೂ ಸುಬ್ರಹಣ್ಯದಲ್ಲಿ ಬಸ್ ನಿಲ್ದಾಣ ಸ್ಥಾಪನೆ, ಬೆಳ್ಳಾರೆ, ಪಂಜ ಗುತ್ತಿಗಾರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಮಿನಿ ವಿಧಾನಸೌಧ, ಸುಳ್ಯದಲ್ಲಿ ಬಸ್ ಡಿಪೋ, ಅಕ್ರಮ-ಸಕ್ರಮ ಕಡತ ವಿಲೇವಾರಿ, ನಗರ ಪಂಚಾಯತ್ ೧೭ ಕೋಟಿ ಅನುದಾನ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಸ್ಟರ್ ಪ್ಲಾನ್ ರಚನೆ, ಪ್ರಮುಖ ರಸ್ತೆಗಳ ಅಭಿವೃದ್ಧಿ ಸೇತುವೆ, ತೂಗುಸೇತುವೆಗಳ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನುಅನುಷ್ಠಾನಗೊಳಿಸಿದ್ದಾರೆ. ೨೫ ಕೋಟಿ ರೂ. ಮುಖ್ಯಮಂತ್ರಿಯವರ ವಿಶೇಷ ಅನುದಾನವನ್ನು ಸುಳ್ಯ ಕ್ಷೇತ್ರಕ್ಕೆ ಮಂಜೂರುಗೊಳಿಸಿ ಗ್ರಾಮಾಂತರ ಪ್ರದೇಶಗಳ ರಸ್ತೆ, ಸೇತುವೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಸುಮಾರು ೫೦ ಕೋಟಿ ರೂ.ಗಳನ್ನು ದೇವಸ್ಥಾನಗಳಿಗೆ ಅನುದಾನ ಮಂಜೂರುಗೊಳಿಸಿದ್ದಾರೆ.
ಸತತ ೬ ಬಾರಿ ಶಾಸಕರಾಗಿದ್ದರೂ ತಾನು ನಡೆದುಬಂದ ದಾರಿ ಮರೆಯದ ಎಸ್.ಅಂಗಾರ ಕಷ್ಟ ಜೀವಿ. ಸರಳತೆ ಮತ್ತು ಸಜ್ಜನಿಕೆಯಿಂದಲೂ ಜನ ಮಾನ್ಯರಾಗಿದ್ದಾರೆ. ಬಿಡುವಿನ ವೇಳೆಯಲ್ಲೂ ತೋಟಕ್ಕೆ ತೆರಳಿ ಕೆಲಸ ಮಾಡುತ್ತಾರೆ. ಬೆಂಗಳೂರಿನಲ್ಲಿರುವ ತನ್ನ ವಸತಿಯಲ್ಲಿ ತಾನೇ ಅಡುಗೆ ಮಾಡಿ ಉಣ್ಣುತ್ತಾರೆ, ಬಂದವರಿಗೂ ಉಣ ಬಡಿಸುತ್ತಾರೆ.
ಅಂಗಾರರ ನೋವು ನಲಿವುಗಳಲ್ಲಿ ಭಾಗಿಯಾದವರು ಇವರ ಪತ್ನಿ ಶ್ರೀಮತಿ ವೇದಾವತಿ. ಪುತ್ರ ಗೌತಮ್ ಇಂಜಿನಿಯರ್ ಪದವಿ ಪೂರೈಸಿದ್ದಾರೆ. ಪುತ್ರಿ ಪೂಜಾಶ್ರೀ ಬಿಎ ಎಂಎಸ್ ಕಲಿಯುತ್ತಿದ್ದಾರೆ. ಇಬ್ಬರು ಸಹೋದರರು, ಓರ್ವ ಸಹೋದರಿ ಅಂಗಾರರಿಗಿದ್ದಾರೆ.