ಸೋಲಿನ ಭೀತಿಯಿಂದ ಸಂತೋಷ್, ಮಣಿಕಂಠ್ ವಿರುದ್ಧ ಸುಳ್ಳು ಆರೋಪ: ಕಾಂಗ್ರೆಸ್ ವಿರುದ್ಧ ಅಷ್ಠಗಿ ಆಕ್ರೋಶ

ಕಲಬುರಗಿ,ಮೇ.7: ಪ್ರಸ್ತುತ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಭೀತಿಯಿಂದ ಹತಾಶೆಯಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ಚಿತ್ತಾಪುರ ಮೀಸಲು ವಿಧಾನಸಭಾ ಮತಕ್ಷೇತ್ರದ ಅಭ್ಯರ್ಥಿ ಮಣಿಕಂಠ್ ರಾಠೋಡ್ ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ್ ಅಷ್ಟಗಿ ಅವರು ಆರೋಪಿಸಿದರು.
ನಗರದ ಬಿಜೆಪಿ ವಿಭಾಗೀಯ ಮಾಧ್ಯಮ ಕೇಂದ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಹೊತ್ತಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಆರೋಪಗಳನ್ನು ಬಿಜೆಪಿ ಮುಖಂಡರು ಹಾಗೂ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಇಂಜಿನಿಯರಿಂಗ್ ಪದವೀಧರರು. ಎಲ್ಲ ಸಮಾಜದ ಜನರನ್ನು ಒಂದಾಗಿ ತೆಗೆದುಕೊಂಡು ಹೋಗುವವರು. ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ಮೂಲಕ ಪಕ್ಷಕ್ಕೆ ಹಗಲಿರುಳು ದುಡಿಯುವ ವ್ಯಕ್ತಿ. ರಾಷ್ಟ್ರಕ್ಕೆ ಸಮರ್ಪಿತವಾದ ರಾಷ್ಟ್ರಪ್ರೇಮಿ. ಅಂಥವರಿಗೆ ಲಿಂಗಾಯತ ವಿರೋಧಿ ಎಂಬ ಪಟ್ಟವನ್ನು ಕಾಂಗ್ರೆಸ್ ಕಟ್ಟುತ್ತಿದೆ ಎಂದು ಅವರು ಕಿಡಿಕಾರಿದರು.
ಬಿ.ಎಲ್. ಸಂತೋಷ್ ಅವರು ಈಗಾಗಲೇ ತಾವು ಲಿಂಗಾಯತರು ಬೇಕಾಗಿಲ್ಲ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆ ಕುರಿತು ದೂರು ಸಹ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಆದಾಗ್ಯೂ, ಕಾಂಗ್ರೆಸ್ಸಿಗರು ಅದನ್ನೇ ಅಪಪ್ರಚಾರ ಮಾಡಿಕೊಂಡು ಬಿಜೆಪಿಯ ವಿರುದ್ಧ ಮತದಾರರನ್ನು ಎತ್ತಿಕಟ್ಟುವಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ದೂರಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರೂ ಸಹ ಬಿಜೆಪಿಯ ಚಿತ್ತಾಪುರ ಅಭ್ಯರ್ಥಿ ಮಣಿಕಂಠ್ ರಾಠೋಡ್ ಅವರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆ ಕುರಿತು ಈಗಾಗಲೇ ಮಣಿಕಂಠ್ ರಾಠೋಡ್ ಅವರು ಸೈಬರ್ ಕ್ರೈಂಗೆ ದೂರು ಸಲ್ಲಿಸಿದ್ದಾರೆ. ಆ ಆಡಿಯೋ ನಕಲಿಯಾಗಿದೆ. ಅದರಲ್ಲಿ ಯಾವುದೇ ರೀತಿಯಲ್ಲಿ ಸತ್ಯ ಇಲ್ಲ ಎಂದು ಅವರು ಹೇಳಿದರು.
ಮಣಿಕಂಠ್ ರಾಠೋಡ್ ಅವರು ಚಿತ್ತಾಪುರ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆಯನ್ನು ಒಡ್ಡಿದ್ದು, ಅವರ ಆಯ್ಕೆ ಖಚಿತವಾಗಿದೆ. ಇದರಿಂದ ಕಾಂಗ್ರೆಸ್ಸಿಗರು ಹತಾಶರಾಗಿ ಮಣಿಕಂಠ್ ರಾಠೋಡ್ ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ಹಾಕಿಸುವ ತಮ್ಮ ಮೊದಲಿನ ಕಾರ್ಯಗಳನ್ನು ಮುಂದುವರೆಸಿದ್ದಾರೆ. ಈ ಹಿಂದೆ ಮಣಿಕಂಠ್ ರಾಠೋಡ್ ಅವರ ವಿರುದ್ಧ ಪ್ರಕರಣಗಳು ದಾಖಲಾಗಿರುವುದು ಕಾಂಗ್ರೆಸ್ಸಿಗರ ಪ್ರಚೋದನೆಯೇ ಕಾರಣವಾಗಿದೆ. ಈಗ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಆಡಿಯೋ ಮುಂದಿಟ್ಟುಕೊಂಡು ಮತ್ತೊಂದು ಪ್ರಕರಣವನ್ನು ಕಾಂಗ್ರೆಸ್ಸಿಗರು ದಾಖಲು ಮಾಡಿ ಅವರನ್ನು ಹೇಗಾದರೂ ಮಾಡಿ ಬಂಧಿಸುವಂತಹ ಹೇಯ ಕೃತ್ಯಕ್ಕೆ ಮುಂದಾಗಿದ್ದಾರೆ ಎಂದು ಅವರು ಆರೋಪಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ಜೈಲಿಗೆ ಹೋಗಿ ಬಂದಿದ್ದಾರೆ. ಇನ್ನು ಅವರ ಪಕ್ಷದ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಕ್ಷೇತ್ರಕ್ಕೆ ಹೋಗದಂತೆ ನಿಷೇಧ ವಿಧಿಸಿದೆ. ಅಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ಬಿಟ್ಟು, ತಾವೇ ಪ್ರಕರಣಗಳನ್ನು ಹಾಕಿಸಿರುವ ಕಾಂಗ್ರೆಸ್ಸಿಗರು ಮಣಿಕಂಠ್ ರಾಠೋಡ್ ಅವರ ಕುರಿತು ಮಾತನಾಡುವ ನೈತಿಕ ಹಕ್ಕು ಕಳೆದುಕೊಂಡಿದ್ದಾರೆ ಎಂದು ಅವರು ಹೇಳಿದರು.
ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಲಿಂಗಾಯತರು ಭ್ರಷ್ಟರು ಎಂದಿದ್ದಾರೆ. ಇಡೀ ವಿಶ್ವವೇ ತಿರುಗಿ ನೋಡುವ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಸೋಲಿನ ಭೀತಿಯಿಂದ ದೇಶದ ಪ್ರಧಾನಿ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವು 130 ಸ್ಥಾನಗಳಿಗಿಂತ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಅವರ ಜನಮನ್ನಣೆ ನೋಡಿ ವಿಚಲಿತವಾಗಿದೆ ಎಂದು ಅವರು ಟೀಕಿಸಿದರು.
ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ. ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋನಲ್ಲಿ ಸುನಾಮಿ ರೀತಿಯಲ್ಲಿ ಜನರು ಸೇರುತ್ತಿದ್ದಾರೆ. ಜಿಲ್ಲೆಯಲ್ಲಿಯೂ ಸಹ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಅತೀ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ. ಎಡಗೈ ಹಾಗೂ ಬಲಗೈ ಸಮುದಾಯದ ನಾವು ಎಲ್ಲರೂ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಲಿದ್ದೇವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜು ವಾಡೇಕರ್, ಬಸವರಾಜ್ ಬೆಣ್ಣೂರ್, ಗಣೇಶ್ ವಳಕೇರಿ, ನಾಗರಾಜ್ ಸೋಲಾಪುರ, ಅಂಬಾರಾಯ್ ಬೆಳಕೋಟಾ, ಅಂಬಾರಾಯ್ ಚಲಗೇರಾ, ಮಹೇಶ್ ವಾಡೇಕರ್, ಬಸವರಾಜ್ ಚಿತ್ತೂರ್, ಶಿವಾ ಅಷ್ಟಗಿ ಮುಂತಾದವರು ಉಪಸ್ಥಿತರಿದ್ದರು.