ಸೋಲಿನ ಭೀತಿಯಲ್ಲಿ ಕಾಂಗ್ರೆಸ್ ನಾಯಕರು : ಶಿವಾನಂದ ಮಂಠಾಳಕರ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಮಾ.19: ಸೋಲಿನ ಭೀತಿಯಿಂದ ಕಾಂಗ್ರೆಸ್ ನಾಯಕರು ಬಿಜೆಪಿ ಪಕ್ಷ ಲಿಂಗಾಯತ ಸಮುದಾಯದ ವಿರೋಧಿಯಾಗಿದೆ ಎಂದು ಅಪಪ್ರಚಾರದ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ತಿಳಿಸಿದ್ದಾರೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತವಾಗಿದೆ. ರಾಜ್ಯದ ಜನ ಬೆಂಬಲ ನೀಡುವುದಿಲ್ಲ ಎಂದು ತಿಳಿದು ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ. ಸಿಟಿ ರವಿ ಲಿಂಗಾಯತ ಸಮುದಾಯದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಕಾಂಗ್ರೆಸ್ ನಾಯಕರು ಅದನ್ನು ತಿರುಚಿ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ನಡೆ ಆರೋಗ್ಯಕರ ಬೆಳವಣಿಗೆ ಅಲ್ಲ ಎಂದಿದ್ದಾರೆ.
ಲಿಂಗಾಯತ ಸಮುದಾಯದಲ್ಲಿ ಬಿಜೆಪಿ ಕುರಿತು ಅಸಮಾಧಾನ ಮೂಡಿಸಲು ಯತ್ನಿಸಲಾಗುತ್ತಿದೆ. ಕಾಂಗ್ರೆಸ್‍ನ ಈ ಪ್ರಯತ್ನ ಫಲ ಕೊಡುವುದಿಲ್ಲ. ಬಿಜೆಪಿ ಪಕ್ಷದ ಕುರಿತು ಮಾತನಾಡುವ ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆಯು ಇಲ್ಲ. ಲಿಂಗಾಯತ ಸಮುದಾಯದ ಬಗ್ಗೆ ಬಿಜೆಪಿಗೆ ಅಪಾರ ಗೌರವವಿದೆ. ಲಿಂಗಾಯತ ಸಮುದಾಯವೂ ಬಿಜೆಪಿಯನ್ನು ಬೆಂಬಲಿಸುತ್ತ ಕಾಂಗ್ರೆಸ್ ನಾಯಕರ ಷಡ್ಯಂತ್ರ ಫಲಿಸುವುದಿಲ್ಲ ಎಂದು ತಿಳಿಸಿದ್ದಾರೆ