ಸೋಲಿನ ಆತ್ಮಾವಲೋಕನ ಮಾಡುತ್ತೇವೆ: ಆಲಗೂರ

ಸಂಜೆವಾಣಿ ವಾರ್ತೆ,
ವಿಜಯಪುರ:ಜೂ.6:ಚುನಾವಣೆಯಲ್ಲಿ ನಾವು ಸೋತಿರಬಹದು. ಕಾರ್ಯತಂತ್ರ ಹಾಗೂ ಪ್ರಚಾರ ವಿಷಯದಲ್ಲಿ ನಾವು ಸೋತಿಲ್ಲ ಎಂದು ವಿಜಯಪುರ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬರಲಿಲ್ಲ. ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ ಎಂದರು.
ನಾನು ಆಯ್ಕೆಯಾದರೆ ಜಾತಿ ನಿಂದನೆ ಕೇಸ್ ಅಧಿಕವಾಗುತ್ತವೆ ಎಂಬ ಅಪಪ್ರಚಾರ ಮಾಡಿದರು. ಇದು ಸಹ ಹಿನ್ನೆಡೆಗೆ ಕಾರಣ ಇರಬಹದು ಎಂದು ಆಲಗೂರ ಹೇಳಿದರು.
ಜಿಲ್ಲೆಯ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು, ಎಲ್ಲ ಶಾಸಕರು, ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ ಎಲ್ಲ ಅಭ್ಯರ್ಥಿಗಳು ನನ್ನ ಪರವಾಗಿ ಅಪಾರವಾಗಿ ಶ್ರಮಿಸಿದ್ದಾರೆ, ಈ ಫಲವಾಗಿಯೇ ಆರು ಲಕ್ಷ ಜನ ನನಗೆ ಮತ ರೂಪದ ಆಶೀರ್ವಾದ ನೀಡಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುವೆ, ಉತ್ತಮ ಕಾರ್ಯಗಳಿಗೆ ಸದಾ ಬೆಂಬಲ ನೀಡುವೆ ಎಂದರು.
ಗ್ಯಾರಂಟಿ ಬಲದಿಂದ ಹೆಚ್ಚು ಮತ ನಿರೀಕ್ಷೆ ಇತ್ತು. ಅದು ಹುಸಿಯಾಯಿತು. ವಿಜಯಪುರ ಜಿಲ್ಲೆಯಲ್ಲಿ ಹಿಂದೂತ್ವ ಅಲೆ, ಮೋದಿ ಅಲೆ ಸಹ ವ್ಯಾಪಕವಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಸೋಲಾಗಿದೆ ಎಂದರು.
ಎಲ್ಲ ಶಾಸಕರು ನಮ್ಮ ಪರವಾಗಿ ಕೆಲಸ ಮಾಡಿದ್ದಾರೆ, ಎಲ್ಲರೂ ಒಗ್ಗಟ್ಟಾಗಿಯೇ ನನಗೆ ಟಿಕೆಟ್ ದೊರಕಿಸಿದ್ದಾರೆ.
ಕೆಪಿಸಿಸಿ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅವರು ನನಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಒಂದು ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ್ದು, ಇದನ್ನು ಶೀಘ್ರದಲ್ಲಿ ಸಲ್ಲಿಸುವೆ ಎಂದರು.
ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಮುಖಂಡರಾದ ವೈಜನಾಥ ಕರ್ಪೂರಮಠ, ಎಸ್.ಎಂ. ಪಾಟೀಲ ಗಣಿಗಾರ, ಸೋಮನಾಥ ಕಳ್ಳಿಮನಿ, ಡಾ.ಗಂಗಾಧರ ಸಂಬಣ್ಣಿ, ಚಾಂದಸಾಬ ಗಡಗಲಾವ, ಸಾಹೇಬಗೌಡ ಬಿರಾದಾರ ಮತ್ತಿತರರು ಇದ್ದರು.