ಸೋಲಾರ್ ಪ್ಲಾಂಟ್‍ಗೆ 2,415 ಮರಗಳು ಬಲಿ!

ಹುಮನಾಬಾದ್:ನ.11: ಸೋಲಾರ್ ಪ್ಲಾಂಟ್ ಘಟಕ ಸ್ಥಾಪನೆಗಾಗಿ ಸುಮಾರು 2,415 ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ಬಿದ್ದಿರುವುದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ತಾಲ್ಲೂಕಿನ ಧುಮ್ಮನಸೂರ್ ಗ್ರಾಮದ ಹೊರವಲಯದ ಚೀನಕೇರಾ ಕ್ರಾಸ್ ಸಮೀಪದ ಕೈಗಾರಿಕಾ ಅಭಿವೃದ್ಧಿ ಮಂಡಳಿಗೆ ಸೇರಿದ 195 ಎಕರೆಯಲ್ಲಿ ಸೋಲಾರ್ ?ಪ್ಲಾಂಟ್ ನಿರ್ಮಿಸಲಾಗುತ್ತಿದ್ದು, ಬಹುತೇಕ ಮರಗಳು ಈಗಾಗಲೇ ನೆಲಕ್ಕೆ ಉರುಳಿವೆ.
‘ಒಂದೆಡೆ ಸರ್ಕಾರ ಗಿಡ ಮರಗಳ ಸಂಖ್ಯೆ ಹೆಚ್ಚಳವಾಗಬೇಕು ಎಂಬ ಉದ್ದೇಶದಿಂದ ನೂರಾರು ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದರೆ, ಇನ್ನೊಂದೆಡೆ ಅಭಿವೃದ್ಧಿ ನೆಪದಲ್ಲಿ ಬೃಹತ್ತಾಗಿ ಬೆಳೆದ ಸಾವಿರಾರು ಮರಗಳನ್ನು ಕಡಿಯುವುದಕ್ಕೆ ಆಸ್ಪದ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ?’ ಎಂಬ ಪ್ರಶ್ನೆ ಸುತ್ತಮುತ್ತಲಿನ ಗ್ರಾಮಗಳ ಜನರದ್ದಾಗಿದೆ.
‘ಸುಮಾರು ವರ್ಷಗಳಿಂದ ಸಾವಿರಾರು ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡುತ್ತಿದ್ದ ಮರಗಳು ಕೊಡಲಿ ಏಟಿಗೆ ಬಲಿಯಾಗಿದ್ದರಿಂದ ಅವು ಕಂಗಾಲಾಗಿವೆ. ರಸ್ತೆ ಸೇರಿದಂತೆ ಇಡೀ 195 ಎಕ್ಕರೆ ಸದಾ ಹಸಿರಿನಿಂದ ಕಂಗೊಳಿಸುತ್ತಿತ್ತು. ಒಂದು ಮರ ಬೆಳೆಸಲು 8ರಿಂದ 10 ವರ್ಷ ಕಾಯಬೇಕು. ಅದು ತನ್ನ ಜೀವಿತಾವಧಿಯಲ್ಲಿ ಮನುಷ್ಯನಿಗೆ ಕೋಟ್ಯಂತರ ರೂಪಾಯಿಗಳಷ್ಟು ಪರೋಕ್ಷವಾಗಿ ಅನುಕೂಲ ನೀಡುತ್ತದೆ. ಆದರೆ, ಸೋಲಾರ್ ಪ್ಲಾಂಟ್ ನಿರ್ಮಾಣಕ್ಕಾಗಿ ಮರಗಳನ್ನು ಕಡಿದಿರುವುದು ಎಷ್ಟರ ಮಟ್ಟಿಗೆ ಸರಿ? ಒಂದು ಮರ ಕಡಿದರೆ ಅದರ ಅಕ್ಕಪಕ್ಕ 10 ಗಿಡಗಳನ್ನು ನೆಡುವುದರ ಮೂಲಕ ಪರಿಸರ ಸಮತೋಲನ ಕಾಪಾಡಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಶಶಿಕುಮಾರ್ ಮಾಶೆಟ್ಟಿ ಒತ್ತಾಯಿಸಿದ್ದಾರೆ.
‘ತಾಲ್ಲೂಕಿನ ಧುಮ್ಮನಸೂರ್ ಗ್ರಾಮದ ಹೊರವಲಯದಲ್ಲಿನ ಕೈಗಾರಿಕಾ ಅಭಿವೃದ್ಧಿ ಮಂಡಳಿಯ ವಿವಿಧ ಸರ್ವೇ ನಂಬರ್‍ಗಳಲ್ಲಿನ ಸುಮಾರು 2,415 ಮರಗಳು ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಅಡ್ಡಲಾಗಿ ಬರುತ್ತವೆ. ಇಲಾಖೆಯ ನಿರ್ದೇಶನದಂತೆ ಮರಗಳನ್ನು ಹರಾಜು ಮಾಡಿ ಸುಮಾರು?7.35 ಲಕ್ಷಕ್ಕೆ ಮಂಜೂರಾತಿ ಮಾಡಲಾಗಿದೆ’ ಎಂದು ತಾಲ್ಲೂಕು ಅರಣ್ಯಾಧಿಕಾರಿ ಶಿವಕುಮಾರ್ ರಾಠೋಡ ತಿಳಿಸಿದರು.