(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು25: ತಾಲೂಕಿನ ಶಿಗ್ಲಿ ಗ್ರಾಮದಲ್ಲಿರುವ ಮಾದರಿ ಪ್ರಾಥಮಿಕ ಕನ್ನಡ ಶಾಲೆಯ ವರ್ಗದ ಕೋಣೆಯಲ್ಲಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ನೀರು ಸೋರಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ.
ಏಳೆಂಟು ವರ್ಷಗಳ ಹಿಂದೆ ನಿರ್ಮಿಸಿದ ಲಕ್ಷಾಂತರ ರೂಪಾಯಿ ವೆಚ್ಚದ ಶಾಲಾ ಕೊಠಡಿಯ ಒಂದು ಭಾಗ ಈಗ ಸೋರಲಾರಂಭಿಸಿದ್ದು ಇದೇ ರೀತಿ ಮಳೆ ಮುಂದುವರೆದರೆ ಮಕ್ಕಳ ದೃಷ್ಟಿಯಿಂದ ಶಾಲೆಗೆ ರಜ ಕೊಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಶಾಲಾ ಕೋಣೆ ಸೋರುತ್ತಿರುವ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಗಮನಕ್ಕೂ ತರಲಾಗಿದೆ ಎಂಬ ಮಾಹಿತಿ ಲಭ್ಯವಿದೆ.
ಆದರೆ ಅಧಿಕಾರಿಗಳು ಶಿಕ್ಷಕರ ಮೇಲೆಯೇ ಜವಾಬ್ದಾರಿ ಬಿಟ್ಟು ಶಾಲಾ ಸುಧಾರಣಾ ಮತ್ತು ಮೇಲುಸ್ತುವಾರಿ ಸಮಿತಿಯವರು ಪರಿಸ್ಥಿತಿ ಹೀಗೆ ಮುಂದುವರೆದರೆ ರಜೆ ನೀಡುವಂತೆ ಸೂಚಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಶಿಕ್ಷಣ ಪ್ರೇಮಿ ಸೋಮಣ್ಣ ಡಾನ್ಗಲ್ ರವರು ಶಿಕ್ಷಣ ಇಲಾಖೆಯವರು ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುವುದಕ್ಕಿಂತ ಸೂಕ್ತ ನಿರ್ಧಾರ ಕೈಗೊಂಡು ಶಾಲಾ ಕೊಠಡಿಯನ್ನು ದುರಸ್ತಿ ಮಾಡಿ ಪಾಠ ಪ್ರವಚನ ಮಾಡಬೇಕು ಎಂದು ಹೇಳಿದ್ದಾರೆ.