ಸೋಯಾಬಿನ್ ಬೆಳೆಗೆ ಕೀಟ ಬಾಧೆ: ಕೃಷಿ ವಿಜ್ಞಾನಿಗಳಿಂದ ಬೆಳೆ ಸಮೀಕ್ಷೆ

ಬೀದರ್:ಸೆ.14: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಯಾಬಿನ್‍ಗೆ(ಸೋಯಾ ಅವರೆ) ಎಲೆ ತಿನ್ನುವ ಸ್ಪೊಡೊಪ್ಟೆರಾ ಕೀಟ, ಕೊಂಡಿಲು ಹಾಗೂ ಹಸಿರು ಹುಳು ಬಾಧೆ ಕಂಡು ಕಾಣಿಸಿಕೊಂಡಿದೆ.
ಜನವಾಡ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಬುಧವಾರ ನಡೆಸಿದ ಬೆಳೆ ಸಮೀಕ್ಷೆ ವೇಳೆ ಅನೇಕ ರೈತರ ಹೊಲಗಳಲ್ಲಿ ಕೀಟ ಬಾಧೆ ದೃಢಪಟ್ಟಿದೆ.
‘ಸೋಯಾಅವರೆಯಲ್ಲಿ ಹಳದಿ ನಂಜು ರೋಗ ಹಾಗೂ ತೊಗರಿಯಲ್ಲಿ ಗೊಡ್ಡು ರೋಗ ಪತ್ತೆಯಾಗಿದೆ. ಸ್ಪೊಡೊಪ್ಟೆರಾ ಬಹುಭಕ್ಷಕ ಕೀಟವಾಗಿದೆ. ಹೆಣ್ಣು ಕೀಟವು 200ರಿಂದ 300 ಮೊಟ್ಟೆಗಳನ್ನು ಗುಂಪಾಗಿ ಬೆಳೆಯ ಚಿಗುರೆಲೆ ಮೇಲಿಟ್ಟು, ಅವುಗಳನ್ನು ಕಂದು ಹಳದಿ ಕೂದಲಿನಿಂದ ಮುಚ್ಚುತ್ತದೆ. ಮರಿ ಕೀಟಗಳು ಮೊದಲು ಎಲೆಯ ಹಸಿರು ಭಾಗ ತಿನ್ನುತ್ತವೆ. ದೊಡ್ಡದಾದಂತೆ ಇಡೀ ಎಲೆಯನ್ನು ಕತ್ತರಿಸಿ ತಿನ್ನುತ್ತವೆ. ಬಾಧೆ ಜಾಸ್ತಿಯಾದಲ್ಲಿ ಗಿಡದಲ್ಲಿಲ ಕಡ್ಡಿಗಳು ಮಾತ್ರ ಕಾಣುತ್ತವೆ’ ಎಂದು ಸಮೀಕ್ಷಾ ತಂಡದ ನೇತೃತ್ವ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.
ಸ್ಪೊಡೊಪ್ಟೆರಾ ಕೀಟದ ತತ್ತಿ ಹಾಗೂ ಮರಿಗಳ ಗುಂಪುಗಳನ್ನು ಆರಿಸಿ ನಾಶಪಡಿಸಬೇಕು. ಬಾಧೆಯ ಪ್ರಮಾಣ ಹೆಚ್ಚಾದಲ್ಲಿ 0.2 ಮಿ.ಲೀ ಕ್ಲೋಯಾರ್ಂಟ್ರನಿಲಿಫೆÇ್ರೀಲ್ 18.5 ಎಸ್.ಸಿ. ಅಥವಾ 0.5 ಮಿ.ಲೀ. ಲ್ಯಾಂಬ್ಡಾಸೈಲೋಥ್ರಿನ್ 2 ಮಿ.ಲೀ, ಕ್ಲೊರೋಪೈರಿಫಾಸ್ 20 ಇ.ಸಿ ಅಥವಾ 0.1 ಮಿ.ಲೀ ಸ್ಪೆನೋಸ್ಯಾಡ್ 45 ಎಸ್.ಸಿ ಅಥವಾ 2 ಮಿ.ಲೀ ಮೊನೊಕ್ರೊಟೊಫಾಸ್ ಅಥವಾ 1 ಗ್ರಾಂ. ನಮೋರಿಯಾ ರಿಲೈ ಅಥವಾ 1 ಗ್ರಾಂ ಬಿ.ಟಿ ದುಂಡಾಣು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬಲಿತ ಹುಳುಗಳಿಗೆ ವಿಷ ತಿಂಡಿ ತಯಾರಿಸಿ ಸಂಜೆ ಸಾಲುಗಳ ಮಧ್ಯೆ ಹಾಕಬೇಕು ಎಂದು ಸಲಹೆ ನೀಡಿದ್ದಾರೆ.
ನಂಜು ರೋಗ ನಿರ್ವಹಣಾ ಕ್ರಮ
ಸೋಯಾಬಿನ್ ಬೆಳೆಯಲ್ಲಿ ಹಳದಿ ನಂಜು ರೋಗ ನಿರ್ವಹಣೆಗೆ ರೋಗ ಬಾಧಿತ ಗಿಡಗಳನ್ನು ಕಿತ್ತು ಸುಟ್ಟು ನಾಶಪಡಿಸಬೇಕು. ಹೊಲದಲ್ಲಿ ಪ್ರತಿ ಎಕರೆಗೆ 8 ರಿಂದ 10 ಹಳದಿ ಅಂಟು ಬಲೆಗಳನ್ನು ಬೆಳೆಗಳಿಗಿಂತ ಒಂದು ಅಡಿ ಮೇಲೆ ಇರುವಂತೆ ಅಳವಡಿಸಬೇಕು. ಇಮಿಡಾಕ್ಲೊಪ್ರಿಡ್ 17.5 ಎಸ್.ಎಲ್. ಪ್ರತಿ ಲೀಟರ್‍ಗೆ 0.3 ಮಿ.ಲೀ ಅಥವಾ ಥಾಯೊಮಿಥ್ಯಾಕ್ಸಮ್ ಪ್ರತಿ ಲೀಟರ್‍ಗೆ 0.3 ಗ್ರಾಂ ಅಥವಾ ಅಸಿಫೇಟ್ ಪ್ರತಿ ಲೀಟರ್‍ಗೆ 1.0 ಗ್ರಾಂ. ಬೆರೆಸಿ ಸಿಂಪಡಿಸಬೇಕು ಎಂದು ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ. ಗೊಡ್ಡು ರೋಗದಿಂದ ತೊಗರಿ ಸಂರಕ್ಷಣೆಗೆ ರೋಗಾಣುವಿನ ಆಸರೆ ಸಸ್ಯಗಳಾದ ಬಹು ವಾರ್ಷಿಕ ತೊಗರಿ ಮತ್ತು ಕುಳೆ ತೊಗರಿ ಬೆಳೆಯನ್ನು ಕಿತ್ತು ನಾಶಪಡಿಸಬೇಕು. ರೋಗದ ಪ್ರಾರಂಭದ ಹಂತದಲ್ಲಿ ರೋಗ ಬಾಧಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ಬೆಳೆಯ ಆರಂಭಿಕ ಹಂತದಲ್ಲಿ ನುಶಿ ನಾಶಕಗಳಾದ ನೀರಿನಲ್ಲಿ ಕರಗುವ ಗಂಧಕ ಪ್ರತಿ ಲೀಟರ್‍ಗೆ 2.5 ಗ್ರಾಂ. ಬೆರೆಸಿ ಸಿಂಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.