ಸೋಮಸಮುದ್ರದಲ್ಲಿ ರಂಜಿಸಿದ
ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ  ಸೋಮಸಮುದ್ರ ಗ್ರಾಮದಲ್ಲಿ ನಿನ್ನೆ ರಾತ್ರಿ ಹಂದ್ಯಾಳು ಗ್ರಾಮದ ಶ್ರೀ ಮಹಾದೇವತಾತ ಕಲಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಿಂದ ಹಮ್ಮಿಕೊಂಡ ಸಂಕ್ರಾಂತಿ ಸಾಂಸ್ಕೃತಿಕ ಸಂಭ್ರಮ ಜನ ಮನಸೂರೆಗೊಂಡಿತು.
ಗ್ರಾಮದ ಸರ್ಕಾರಿ ಶಾಲಾವರಣದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಉದ್ಯಮಿ ತಿಮ್ಮಪ್ಪ ಜೋಳದರಾಶಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ರಂಗ ಕಲೆ ಗ್ರಾಮೀಣ ಜನರ ಅಚ್ಚುಮೆಚ್ಚಿನ ಕಲೆಯಾಗಿದೆ. ಯಾವುದೇ ನಾಟಕವಾಗಲಿ ಅದನ್ನು ಗ್ರಾಮದ ಜನರು  ಒಟ್ಟಾಗಿ ಕುಳಿತು ಹಬ್ಬದ ರೀತಿ ಸಂಭ್ರಮಿಸಿ ನೋಡುತ್ತಾರೆ. ಇಂದು ಈ ಗ್ರಾಮದಲ್ಲಿ ಸಹ ಇದೆ ವಾತಾವರಣ ಇದೆ ಎಂದರು.
ರಂಗ ಕಲೆಗೆ ಪ್ರೋತ್ಸಾಹದ ಕೊರತೆ ಕಾಡುತ್ತಿದೆ. ಟಿವಿ ಧಾರಾವಾಹಿ, ಸಿನಿಮಾ  ಹಾವಳಿಗೆ ನಮ್ಮ ರಂಗಭೂಮಿ ನಲುಗುವ ಹಾಗೆ ಹಾಗಿದೆ. ಇದನ್ನು ಪ್ರೋತ್ಸಾಹಿಸುವ ಅನಿವಾರ್ಯತೆ ಎಲ್ಲರ ಮೇಲಿದೆ. ಈ  ಸಂಘವು  ಕಳೆದ 18 ವರ್ಷಗಳಿಂದ ಗ್ರಾಮೀಣ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತ ಬಂದಿರುವುದು ಶ್ಲಾಘನೀಯವೆಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯದರ್ಶಿ ಡಾ. ಕೆ. ಶಿವಲಿಂಗಪ್ಪ ಹಂದ್ಯಾಳು ಮಾತನಾಡಿ, ಕಲಾ ಸೇವೆ ಒಂದು ಪವಿತ್ರ ಕೆಲಸ. ಯಾವುದೇ ಕಲೆ ಆಗಲಿ ಜಾತಿ, ಬಣ್ಣ, ವರ್ಗ ನೋಡಿ ಒಲಿಯುವುದಿಲ್ಲ. ಬದಲಿಗೆ ಶ್ರಮ, ಆಸಕ್ತಿ ಆಧಾರದಲ್ಲಿ ಒಲಿಯುತ್ತದೆ. ಯಾರೇ ಆಗಲಿ ಕಲಾ ಸೇವೆ ಮಾಡುವ ಮನಸ್ಸು ಹೊಂದಿದವರು ಹಿಂಜರಿಕೆ
 ಸೇವೆ ಮಾಡಲು ಮುಂದಾಗಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾದೇವ ತಾತ ಕಲಾಸಂಘದ ಅಧ್ಯಕ್ಷ,  ಪುರುಷೋತ್ತಮ ಹಂದ್ಯಾಳು ಅವರು, ಸೋಮಸಮುದ್ರದ ಜನ ಕಲಾ ಆರಾಧಕರು. ಯಾವಾಗ ನಾಟಕ ಪ್ರದರ್ಶನ ಮಾಡಿದರು ಸಹಿತ ನೋಡಲು ಕಿಕ್ಕಿರಿದು ಸೇರುತ್ತಾರೆ. ಕಲೆಯನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ಎತ್ತಿದ ಕೈ ಎಂದರು.
ಹಿರಿಯ ಪತ್ರಕರ್ತ ಪಾಟೀಲ್ ವೀರನಗೌಡ ಮಾತನಾಡಿ,
18 ವರ್ಷದ ಹಿಂದೆ ಗ್ರಾಮೀಣ ಭಾಗದಲ್ಲಿ ಸ್ಥಾಪಿತವಾದ ಮಹಾದೇವ ತಾತ ಕಲಾ ಸಂಘ ಇಂದು ರಾಜ್ಯಾದ್ಯಂತ ತನ್ನದೇ ಛಾಪು ಮೂಡಿಸಿದೆ.  ಕಾರಣ ಕಂದಗಲ್ಲು ಹನುಮಂತ ರಾಯರು ರಚಿಸಿದ ರಕ್ತ ರಾತ್ರಿ ನಾಟಕದಲ್ಲಿ ಪುರುಷೋತ್ತಮ ಹಂದ್ಯಾಳು ಅವರು ಶಕುನಿ ಪಾತ್ರದ ಮನಮೆಚ್ಚುವ ಅಭಿನಯವಾಗಿದೆ ಎಂದರು.
ಗ್ರಾಮದ ಹಿರಿಯ ಬಯಲಾಟ ಕಲಾವಿದ ಬಡಿಗೇರ ಈರಣ್ಣ(ಕಾಶಪ್ಪ) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
 ಶರಣಬಸವ ಮತ್ತು ತಂಡದಿಂದ ಸೀತಾಪಹರಣ ಬಯಲಾಟ ಪ್ರದರ್ಶನ,  ಕುಮಾರಿ ಎಸ್. ಅಭಿನಯ ನೃತ್ಯ ಪ್ರದರ್ಶನ. ಕುಮಾರ ಗೌಡ ಮತ್ತು ತಂಡದಿಂದ  ಭಜನಾ ಕಾರ್ಯಕ್ರಮಗಳು  ನಡೆದವು.  ಆರ್.ಕೆ.ಯರೆಗೌಡ ಜಾನಪದ ಗೀತೆ ಗಾಯನ ಮಾಡಿದರು.
ಸೋಮಸಮುದ್ರ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿ ಭದ್ರಪ್ಪ, ಉಪಾಧ್ಯಕ್ಷರು, ಸರ್ವ ಸದಸ್ಯರು, ಪುರುಷೋತ್ತಮ ಗೌಡ, ಮಂಜುನಾಥ್, ಪಂಚಣ್ಣ ಜಡೆಗೌಡ, ಟಿ.ಸಿದ್ದನಗೌಡ, ಜಿ.ಬಸವರಾಜ್, ಎಂ.ಹನುಂಮತಪ್ಪ ಮುಂತಾದವರು ಇದ್ದರು.