
ಬಳ್ಳಾರಿ,ಏ.11-ಕಳೆದ ಎರಡು ಅವಧಿಯಲ್ಲಿ ಶಾಸಕರಾಗಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ಶಾಸಕ ಜಿ.ಸೋಮಶೇಖರರೆಡ್ಡಿ ಅವರ ಪಕ್ಷ ನಿಷ್ಠೆ ಹಾಗೂ ಜನಪರ ಕಾಳಜಿ ನಿಜಕ್ಕೂ ಶ್ಲಾಘನೀಯವಾಗಿದೆಂದು ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಎ.ಪಿ.ಜಿತೇಂದ್ರ ರೆಡ್ಡಿ ಹೇಳಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರು ಹಾಗೂ ತೆಲಂಗಾಣ ರಾಜ್ಯದ ಮೆಹಬೂಬನಗರ ಲೋಕಸಭೆಯ ಮಾಜಿ ಸಂಸದರೂ ಆದ ಜಿತೇಂದ್ರ ರೆಡ್ಡಿ ಅವರು, ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರನ್ನೊಳಗೊಂಡಂತೆ ಪಕ್ಷದ ಕಾರ್ಯಕರ್ತರು, ಪ್ರಮುಖರು, ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು, ಬಿಜೆಪಿಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಮತ್ತು ಧುರೀಣರೊಂದಿಗೆ ಪಕ್ಷದ ಕಚೇರಿಯಲ್ಲಿ ಸಬವೆ ನಡೆಸಿ ಪ್ರಸಕ್ತ ಚುನಾವಣೆ ಕುರಿತು ಚರ್ಚಿಸಿದರು.
ಮೇ 10 ರಂದು ಕರ್ನಾಟಕದಲ್ಲಿ ಏಕ ಕಾಲಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಕಮಲ ಚಿಹ್ನೆಗೆ ಹೆಚ್ಚಿನ ಬಹುಮತ ಬರುವಲ್ಲಿ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.
ನಗರದಲ್ಲಿ ಬಿಜೆಪಿ ಕುರಿತಾದ ವಾಸ್ತವತೆಗಳನ್ನು ಅವಲೋಕಿಸಿದ ಅವರು ಇಡೀ ಜಗತ್ತಿನಲ್ಲಿ ದೇಶಕ್ಕೆ ಮೋದಿ ಒಂದು ಘನತೆ ತಂದು ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಕೋವಿಡ್ ಅವಧಿಯಲ್ಲೂ ಡಬಲ್ ಇಂಜಿನ್ ಸರ್ಕಾರ ಜನರ ಹಿತಾಸಕ್ತಿಗನುಗುಣವಾಗಿ ಸಾಕಷ್ಟು ಶ್ರಮಿಸಿದೆ. ನಗರದಲ್ಲಿ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಸಹ ಜನಪರವಾಗಿ ಕೆಲಸ ಮಾಡಿದ್ದಾರೆ. ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ಸೋಮಶೇಖರರೆಡ್ಡಿ ಅವರನ್ನು ಗೆಲ್ಲಿಸಿಕೊಟ್ಟಲ್ಲಿ ಇನ್ನಷ್ಟು ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲವೆಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ಸಿ.ಇಬ್ರಾಹಿಂ ಬಾಬು ಭಾರತೀಯ ಜನತಾ ಪಾರ್ಟಿ ಮುಖಂಡರಾದ ಕೃಷ್ಣಾ ರೆಡ್ಡಿ, ಕೊಳಗಲ್ ಪ್ರಸಾದ್ ರೆಡ್ಡಿ ಇನ್ನಿತರರು ಇದ್ದರು.