ವಾಷಿಂಗ್ಟನ್, ಎ.೧೫- ದಿನದಿಂದ ದಿನಕ್ಕೆ ಯಶಸ್ಸಿನ ಉತ್ತುಂಗಕ್ಕೆ ಏರುತ್ತಿರುವ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್‌ಎಕ್ಸ್ ಇದೀಗ ಮತ್ತೊಂದು ಮಹತ್ವಪೂರ್ಣ ಮಿಷನ್‌ಗೆ ಮುಂದಾಗಿದೆ. ಸ್ಪೇಸ್‌ಎಕ್ಸ್ ತನ್ನ ಬಹುನಿರೀಕ್ಷಿತ ಸ್ಟಾರ್‌ಶಿಪ್ ಯೋಜನೆಯ ಮೊದಲ ಪರೀಕ್ಷಾರ್ಥ ಉಡಾವಣೆಯನ್ನು ಸೋಮವಾರ ನಡೆಸಲಿದೆ ಎನ್ನಲಾಗಿದೆ.
ಸ್ಟಾರ್‌ಶಿಪ್ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದ್ದು, ಗಗನಯಾತ್ರಿಗಳನ್ನು ಚಂದ್ರನತ್ತ ಮತ್ತು ಅಂತಿಮವಾಗಿ ಅದರಾಚೆಗೂ ಕಳುಹಿಸಲು ವಿನ್ಯಾಸಗೊಳಿಸಲಾಗಿದೆ. ಅಮೆರಿಕಾದ ಟೆಕ್ಸಾಸ್‌ನಲ್ಲಿರುವ ಉಡಾವಣಾ ಕೇಂದ್ರದಿಂದ ಸುಮಾರು ಸೋಮವಾರ ಬೆಳಗ್ಗೆ ೭ ಗಂಟೆ ಸುಮಾರಿಗೆ ಸ್ಟಾರ್‌ಶಿಪ್ ಉಡಾವಣೆಗೊಳ್ಳಲಿದೆ ಎನ್ನಲಾಗಿದೆ. ಆದರೆ ಒಂದು ವೇಳೆ ಸೋಮವಾರದ ಉಡಾವಣಾ ದಿನಾಂಕ ಮುಂದೂಡಿಕೆಯಾದರೆ ಆಗ ಮುಂದಿನ ವಾರದೊಳಗೆ ಮಿಷನ್ ಪೂರ್ಣಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಸ್ಟಾರ್‌ಶಿಪ್ ನೌಕೆಯು ಸಿಬ್ಬಂದಿ ಮತ್ತು ಸರಕುಗಳನ್ನು ಸಾಗಿಸುವ ಮರುಬಳಕೆ ಮಾಡಬಹುದಾದ ಕ್ಯಾಪ್ಸುಲ್ ಮತ್ತು ಮೊದಲ ಹಂತದ ಸೂಪರ್ ಹೆವಿ ಬೂಸ್ಟರ್ ರಾಕೆಟ್ ಅನ್ನು ಒಳಗೊಂಡಿದೆ. ಸುಮಾರು ೧೬೪ ಅಡಿ ಎತ್ತರದ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯು ೨೩೦ ಅಡಿ ಎತ್ತರದ ಭಾರೀ ತೂಕದ ರಾಕೆಟ್‌ನ ಮೇಲೆ ನೆಲೆನಿಂತಿದೆ. ಇನ್ನು ಕಳೆದ ಫೆಬ್ರವರಿಯಲ್ಲಿ ಸ್ಟಾರ್‌ಶಿಪ್‌ನ ಮೊದಲ ಹಂತದ ಬೂಸ್ಟರ್‌ನಲ್ಲಿ ಸ್ಪೇಸ್‌ಎಕ್ಸ್ ೩೩ ರಾಪ್ಟರ್ ಎಂಜಿನ್‌ಗಳ ಯಶಸ್ವಿ ಪರೀಕ್ಷಾ ಉಡಾವಣೆ ನಡೆಸಿತ್ತು. ಇದೀಗ ಮೊದಲ ಪರೀಕ್ಷಾರ್ಥ ಉಡಾವಣೆ ಸೋಮವಾರ ನಡೆಯಲಿದೆ.