ಸೋಮವಾರದಿಂದ ದ್ವಿತೀಯ ಪಿಯುಸಿ ೨ನೇ ಪೂರಕ ಪರೀಕ್ಷೆ ಯಾವುದೇ ತೊಂದರೆಗೆ ಅವಕಾಶ ನೀಡದೇ ಪರೀಕ್ಷೆ ನಡೆಸಿ: ಡಿಸಿ ದಿವಾಕರ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ, 18: ದ್ವಿತೀಯ ಪಿಯುಸಿ ೨ನೇ ವಿಶೇಷ ಪೂರಕ ಪರೀಕ್ಷೆಗಳು ಆ.೨೧ ರಿಂದ ಸೆ.೨ರ ವರೆಗೆ ನಡೆಯಲಿದ್ದು, ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ದಿವಾಕರ ಎಂ.ಎಸ್. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಂಜೆ ಪೂರ್ವಭಾವಿ ಸಿದ್ಧತೆಯ ಕುರಿತು ವಿವಿಧ ಇಲಾಖೆಯ ತಾಲೂಕುವಾರು ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಅವರು, ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವ ವಾಹನಗಳ ಜಿಪಿಎಸ್ ವ್ಯವಸ್ಥೆಯನ್ನು ನಿಯಮಿತವಾಗಿ ಪರಿಶೀಲಿಸಬೇಕು. ಅಧಿಕಾರಿಗಳು ಸೂಕ್ತ ನಿಗಾವಹಿಸಿ ಪರೀಕ್ಷೆ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಗೆ ಅನುವು ಮಾಡಿಕೊಡದೇ, ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಸಹಕರಿಸಬೇಕು.
ಈ ಬಾರಿ  ಆ.೨೧ರಿಂದ ಸೆ.೨ರ ವರೆಗೆ ಮಧ್ಯಾಹ್ನ ೨.೧೫ ರಿಂದ ಸಂಜೆ ೫.೩೦ರ ವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಂತರ ಪ್ರಶ್ನೆ- ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ರವಾನಿಸುವವರೆಗೂ ಎಲ್ಲಾ ತಾಲ್ಲೂಕಿನ ನಿಯೋಜಿತ ಅಂಚೆ ಸಿಬ್ಬಂದಿ ಕರ್ತವ್ಯದಲ್ಲಿರಬೇಕು ಎಂದು ಸೂಚಿಸಿದರು.
ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಸಾರಿಗೆ ಇಲಾಖೆಯಿಂದ ಬಸ್‌ಗಳಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗೆ ನೋಂದಾಯಿಸಿದ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಇದಕ್ಕೂ ಮುನ್ನ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಪ್ರಭಾರ) ನಾಗರಾಜ ಹವಾಲ್ದಾರ್ ಮಾತನಾಡಿ, ಜಿಲ್ಲೆಯ ೯೫ ಕಾಲೇಜಿನಿಂದ ಒಟ್ಟು ೪,೧೮೪ ವಿದ್ಯಾರ್ಥಿಗಳು ೨ನೇ ವಿಶೇಷ ಪೂರ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಜಿಲ್ಲಾ ಕೇಂದ್ರ ಹೊಸಪೇಟೆ ಸೇರಿ ಪ್ರತಿ ತಾಲ್ಲೂಕಿಗೊಂದು ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಬಂದೋಬಸ್ತ್, ಆರೋಗ್ಯ ಸೇವೆ:
ಶಾಂತಿ ಮತ್ತು ಸುವ್ಯವಸ್ಥಿತವಾಗಿ ಪರೀಕ್ಷೆ ಆಯೋಜಿಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುವುದು. ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಲು ಮತ್ತು ರವಾನಿಸಲು ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತದೆ. ಪರೀಕ್ಷಾ ಕೇಂದ್ರಗಳಲ್ಲಿ ನಕಲು ಹಾಗೂ ಯಾವುದೇ ರೀತಿಯಲ್ಲಿ ಶಾಂತಿಗೆ ಭಂಗ ಉಂಟಾಗದAತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ. ಜತೆಗೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಜೊತೆಗೆ ಪರೀಕ್ಷೆ ಅವಧಿಯವರೆಗೂ ಪರೀಕ್ಷಾ ಕೇಂದ್ರದಲ್ಲಿರಲು ಆದೇಶಿಸಿದರು.
 ಪರೀಕ್ಷಾ ಕೇಂದ್ರದ ವಿವರ:
ಜಿಲ್ಲಾ ಕೇಂದ್ರ ಹೊಸಪೇಟೆ ತಾಲ್ಲೂಕಿನ ವಿಜಯನಗರ ಪಿಯು ಕಾಲೇಜು ಸೇರಿದಂತೆ ಕೂಡ್ಲಿಗಿಯ ಸರ್ಕಾರಿ ಪಿಯು ಕಾಲೇಜು, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಸರ್ಕಾರಿ ಜಿಬಿ ಪಿಯು ಕಾಲೇಜು, ಹೂವಿನಹಡಗಲಿಯ ಎಸ್‌ಎಸ್‌ಕೆ ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಹಾಗೂ ಹರಪನಹಳ್ಳಿ ತಾಲ್ಲೂಕಿನ ಎಸ್‌ಯುಜೆಎಂ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.