ಸೋಮಲಾಪುರ: ಸರ್ವಧರ್ಮ ಸಾಮೂಹಿಕ ವಿವಾಹ


ಸಂಜೆವಾಣಿ ವಾರ್ತೆ
ಕುರುಗೋಡು:ಏ.10: ಸತಿ ಪತಿಗಳು ಒಂದಾಗಿ ಸುಂದರವಾದ ಜೀವನ ಸಾಗಿಸಿದರೆ ಆ ಭಗವಂತನ ಕೃಪೆಗೆ ಪಾತ್ರರಾಗುತ್ತಾರೆ. ಪತಿಯ ಇಚ್ಚೆ ಅರಿತು ಸತಿಯಿದ್ದರೆ ಮನೆಯೇ ಸ್ವರ್ಗವಾಗುವುದು ಎಂದು ಶ್ರೀ ಸದ್ಗರು ಷಡಕ್ಷರಿ ಮಹಾಸ್ವಾಮಿ ಅವಧೂತರು ಹೇಳಿದರು.
ಪಟ್ಟಣ ಸಮೀಪದ ಸೋಮಲಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ 31ನೇ ಪುಣ್ಯಾರಾಧನೆ ಹಾಗೂ ಜಾತ್ರಾ ಮಹೋತ್ಸವದ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು-ವರರರನ್ನು ಆಶೀರ್ವಾದಿಸಿ ದಿವ್ಯ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಸಾಮೂಹಿಕ ವಿವಾಹ ಕಾರ್ಯ ಹೆಚ್ಚಾದಂತೆಲ್ಲ ಬಡ ಕುಟುಂಬಗಳಿಗೆ ವರದಾನವಾಗುವ ಜೊತೆಗೆ ಸರ್ವರೂ ಸಮಾನರು ಎಂಬುದನ್ನು ತೋರಿಸುತ್ತದೆ ಎಂದರು.
ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮಗಳು 28 ವರ್ಷಗಳಿಂದ ನಿರಂತರವಾಗಿ ಶ್ರೀಮಠದಲ್ಲಿ ಜರುಗಿವೆ ಈ ವರ್ಷದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹದಲ್ಲಿ 46 ಜೋಡಿ ವಧು-ವರರು ನವ ವಸಂತಕ್ಕೆ ಕಾಲಿಟ್ಟರು.
ಮಹರ್ಷಿ ವಾಲ್ಮೀಕಿ ಗುರುಪೀಠಾದಿಪತಿಗಳು ಶ್ರೀ ಪ್ರಸನ್ನನಂದಾಪುರಿ ಮಹಾಸ್ವಾಮಿಗಳು ಹರಿಹರ ರಾಜನಹಳ್ಳಿ ಮತ್ತು ಜ್ಞಾನ ಜ್ಯೋತಿ ಶಿವಯೋಗಮಂದಿರ ಶ್ರೀ ಜಡೇಶ ತಾತನವರು ವೇದಿಕೆಯ ಸಾನಿಧ್ಯವಹಿಸಿದ್ದರು.
ನಂತರ ನೂತನ ವಧು ವರರನ್ನು  ಶ್ರೀ ಸದ್ಗುರು ಚಿದಾನಂದ ಮಹಾಸ್ವಾಮಿ ಅವಧೂತರ ಮಠದಿಂದ ಪ್ರಮುಕ ಮುಖ್ಯರಸ್ತೆಯಲ್ಲಿ ಮೆರವಣಿಗೆ ಭಜನೆ, ಡೊಳ್ಳು, ಕಹಳೆ, ಕಂಸಾಳೆ ಮತ್ತು ತಮಟೆ ವಾದ್ಯ ಗಳೊಂದಿಗೆ ಸಾಗಿ ಗ್ರಾಮ ದೇವತೆಯಾದ ಶ್ರೀ ಮಾರೆಮ್ಮ ದೇವಸ್ಥಾನಕ್ಕೆ ತಲುಪಿ ದರ್ಶನ ಪಡೆದು ಪುನಹ ಸ್ವಾಮಠಕ್ಕೆ ಆಗಮಿಸಿ ಶ್ರೀ ಸದ್ಗರು ಷಡಕ್ಷರಿ ಮಹಾಸ್ವಾಮಿ ಅವಧೂತರ ದರ್ಶನ ಪಡೆದರು.
ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಎಲ್ಲ ಸಕಲ ಸದ್ಭಕ್ತರು ಶ್ರೀಮಠದಲ್ಲಿ ಪ್ರಸಾದ ಸ್ವೀಕರಿಸಿದರು.
ಗ್ರಾಮ ಪಂಚಾಯಿತಿ ವತಿಯಿಂದ ಕುಡಿಯುವ ನೀರು, ರಸ್ತೆಗಳ ನೈರ್ಮಲ್ಯ, ಬೀದಿ ದೀಪಗಳ ವ್ಯವಸ್ಥೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿತ್ತು.
ಜಾತ್ರಾ ಮಹೋತ್ಸವಕ್ಕೆ ವಿದ್ಯುತ್ ಕಡಿತ ಗೊಳ್ಳಿಸದೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಲ್ಲಿ ವಿದ್ಯುತ್ ಇಲಾಖೆ ಅವರು ಕಾರ್ಯನಿರ್ವಹಿಸಿದರು.
ಕುರುಗೋಡು ಪೊಲೀಸ್ ಠಾಣೆ ಪಿ.ಎಸ್.ಐ ಸಣ್ಣ ಈರೇಶ ಮತ್ತು ಸಿಬ್ಬಂದಿಯವರಿಂದ ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದರು.
ಇಂದು ಸಂಜೆ 5.30ಕ್ಕೆ ಶ್ರೀ ಚಿದಾನಂದ ಮಹಾಸ್ವಾಮಿ ಅವಧೂತರ ಮಹರಥೋತ್ಸವ ಜರಗಲಿದೆ ಮತ್ತು ರಾತ್ರಿ ಗ್ರಾಮಸ್ತರಿಂದ ನೆರೆದ ಜನತೆಗೆ ಮನರಂಜಿಸಲು ಶ್ರೀ ರೇಣುಕಾದೇವಿ ಜಮದಗ್ನಿ ಕಲ್ಯಾಣ ಅರ್ಥಾತ್ ಕಾರ್ತಿ ವೀರ್ಯನ ವಧೆ ಎಂಬ ಪೌರಾಣಿಕ ಬಯಲಾಟ ಪ್ರದರ್ಶನ ಗೊಳ್ಳಲಿದೆ.