ಸೋಮಣ್ಣ ಬಿಜೆಪಿ ಬಿಡಲ್ಲ

ಬೆಂಗಳೂರು,ಮಾ.೬:ವಸತಿ ಸಚಿವ ವಿ. ಸೋಮಣ್ಣ ಅವರು ಬಿಜೆಪಿ ಬಿಟ್ಟು ಹೋಗಲ್ಲ. ಅವರಿಗೆ ಯಾವುದೇ ಅಸಮಾಧಾನ ಇಲ್ಲ ನಾವೆಲ್ಲ ಒಗ್ಗಟ್ಟಾಗಿ ಇದ್ದೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದಲ್ಲಿಂದು ನಡೆದ ಬಿಜೆಪಿಯ ವಿಜಯಸಂಕಲ್ಪ ಯಾತ್ರೆಯಲ್ಲಿ ಸಚಿವ ಸೋಮಣ್ಣ ಅವರ ಜತೆ ಭಾಗಿಯಾಗಿ ಮಾತನಾಡಿದ ಆರ್. ಅಶೋಕ್ ಸೋಮಣ್ಣ ಅವರು ಬಿಜೆಪಿ ಬಿಡುತ್ತಾರೆ, ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬೆಲ್ಲ ಸುದ್ದಿಗಳನ್ನು ಹರಡಲಾಗುತ್ತದೆ. ಸೋಮಣ್ಣ ಬಿಜೆಪಿ ಬಿಡಲ್ಲ ಎಂದು ಸ್ಪಷ್ಟಪಡಿಸಿದರು.ಸಚಿವ ಸೋಮಣ್ಣ ಅವರು ಇಡೀ ಕರ್ನಾಟಕದಲ್ಲೇ ಪ್ರಭಾವಿ ನಾಯಕ, ಅವರನ್ನು ಚಾಮರಾಜನಗರಕ್ಕೋ ವಿಜಯನಗರಕ್ಕೋ ಸೀಮಿತ ಮಾಡಿಬೇಡಿ. ಯಾವುದೇ ಮಠ ಇದ್ದರೂ ಬಾಗಿಲು ತೆಗೆಸಿ ಹೋಗೋ ಶಕ್ತಿ ಇರುವ ಪ್ರಭಾವಿ ನಾಯಕರು ಸೋಮಣ್ಣ, ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದರು.ಕಾಂಗ್ರೆಸ್ ಪಕ್ಷ ಮಾ. ೯ ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಬಗ್ಗೆ ಸಚಿವ ಅಶೋಕ್ ಅವರು, ಕಾಂಗ್ರೆಸ್ ಪಕ್ಷ ತನ್ನ ಭ್ರಷ್ಟಾಚಾರವನ್ನು ಮುಚ್ಚಿಟ್ಟುಕೊಳ್ಳಲು ಎಸಿಬಿ ರಚಿಸಿ ಎಲ್ಲ ಕೇಸ್‌ಗಳನ್ನು ಮುಚ್ಚಿ ಹಾಕಿಕೊಂಡರು. ನಾವು ಯಾವುದೇ ಕೇಸ್ ಮುಚ್ಚಿ ಹಾಕಿಲ್ಲ ಎಂದರು.ಈ ರಾಜ್ಯದಲ್ಲಿ ಮತದಾರ ದೊಡ್ಡವನು.ಯಾರ ಪಾಳೆಗಾರಿಕೆ ನಡೆಯಲ್ಲ, ಕುಮಾರಸ್ವಾಮಿ ಅವರಿಗೆ ಅಧಿಕಾರ ಕೊಟ್ಟಗ ಆಡಳಿತ ನಡೆಸದೆ ಬಿಟ್ಟು ಹೋದರು. ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎಂದರೆ ಜನ ಕುಮಾರಸ್ವಾಮಿ ಅವರನ್ನು ನಂಬಲ್ಲ, ಕಾಂಗ್ರೆಸ್-ಜೆಡಿಎಸ್‌ನವರದ್ದು ಕಳ್ಳ-ಮಳ್ಳ ಆಟ. ಕಾಂಗ್ರೆಸ್‌ನ ಬಿ ಟೀಂ ಜೆಡಿಎಸ್ ಎಂದರು.
ಕ್ಷೇತ್ರದಾದ್ಯಂತ ರಥಯಾತ್ರೆ
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಟೋಲ್‌ಗೇಟ್‌ನಿಂದ ವಿಜಯಸಂಕಲ್ಪ ರಥಯಾತ್ರೆ ಆರಂಭವಾಗಿ ಇಡೀ ಕ್ಷೇತ್ರದಲ್ಲಿ ಈ ಯಾತ್ರೆ ಸಾಗಿದ್ದು, ನೂರಾರು ಬೈಕ್‌ಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಯಾತ್ರೆಯಲ್ಲಿ ಭಾಗಿಯಾದರು.
ಇಡೀ ಕ್ಷೇತ್ರದಲ್ಲಿ ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಜೈಕಾರದ ಘೋಷಣೆಗಳನ್ನು ಕೂಗಿದರು. ಕೇಂದ್ರ ಸಚಿವ
ಭೂಪೇಂದ್ರಯಾದವ್, ಶೋಭಾಕರಂದ್ಲಾಜೆ, ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸೇರಿದಂತೆ ಈ ವಿಜಯಸಂಕಲ್ಪ ಯಾತ್ರೆಯಲ್ಲಿ ಭಾಗಿಯಾದರು.

ಸೋಮಣ್ಣ ಹೇಳಿಕೆ
ಕಾಂಗ್ರೆಸ್ ಸೇರುತ್ತೇನೆ ಎಂಬ ವದಂತಿಗಳಿಗೆ ಉತ್ತರ ಕೊಡಲ್ಲ. ನಾನೇಕೆ ವದಂತಿಗಳಿಗೆ ಉತ್ತರ ಕೊಡಲಿ ಎಂದು ಸಚಿವ ವಿ. ಸೋಮಣ್ಣ, ಗೋವಿಂದರಾಜ ನಗರ ಕ್ಷೇತ್ರದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಹೇಳಿದರು.
ನಾನೇದರೂ ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಹೇಳಿದ್ದೀನಾ, ನಾನ್ಯಾಕೆ ಇಂತಹ ವದಂತಿಗಳಿಗೆ ಉತ್ತರ ಕೊಡಬೇಕು ಎಂದು ಸಚಿವ ಸೋಮಣ್ಣ, ಪ್ರಶ್ನೆ ಕೇಳಿದ ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು.