
ಹುಬ್ಬಳ್ಳಿ, ಮಾ ೧೩: ಸಚಿವ ವಿ.ಸೋಮಣ್ಣ ಅವರು ನಮ್ಮ ಜೊತೆಗಿದ್ದಾರೆ, ಮುಂದೆಯೂ ಜೊತೆಗೆ ಇರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿ. ಸೋಮಣ್ಣ ಅವರು ಕಾಂಗ್ರೆಸ್ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತ ಮೇಲಿನಂತೆ ನುಡಿದರು. ವಿ. ಸೋಮಣ್ಣ ನಾನು ಹಳೆ ಸ್ನೇಹಿತರಿದ್ದು, ಅವರು ನಮ್ಮ ಜೊತೆಗೇ ಇರುತ್ತಾರೆ. ಇದರಲ್ಲಿ ಊಹಾಪೋಹ ಮಾಡುವ ಅವಶ್ಯಕತೆ ಬೇಡ ಎಂದರು. ಕಾಮಗಾರಿಗಳ ಕ್ರೆಡಿಟ್ ವಾರ್ ವಿಚಾರವಾಗಿ ಮಾತನಾಡಿದ ಅವರು, ಸಹಜವಾಗಿಯೇ ಕ್ರೆಡಿಟ್ ವಾರ್ ಇದೆ. ಪಕ್ಕದ ಮನೆಯವಳು ಗಂಡು ಮಗು ಹೆತ್ತರೆ, ಇವರು ಪೇಡೆ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್‌ಗೆ ಸಿಎಂ ತಿರುಗೇಟು ನೀಡಿದರು.
ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಮುಷ್ಕರ ಕರೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇಂಧನ ಸಚಿವರು ಅವರೊಂದಿಗೆ ಚರ್ಚೆಯಲ್ಲಿದ್ದಾರೆ. ಕೂಡಲೇ ಸಮಸ್ಯೆ ಕುರಿತು ಚರ್ಚಿಸಿ ಬಗೆಹರಿಸುತ್ತಾರೆ. ನಮ್ಮ ಸಚಿವರು ಈಗಾಗಲೇ ಎರಡು ಸುತ್ತಿನ ಮಾತುಕತೆ ಸಹ ಮಾಡಿದ್ದಾರೆ ಎಂದರು.
ಮೋದಿ ದೇವರು ಎಂಬ ಕಾಂಗ್ರೆಸ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಮೋದಿ ಅವರನ್ನು ದೇವರು ಅಂದಿಲ್ಲ. ಮೋದಿ ಅವರು ತಮ್ಮನ್ನು ದೇವರು ಅಂತ ಅಂದುಕೊಂಡಿಲ್ಲ. ಮೋದಿ ಅವರು ಒಬ್ಬ ಮಹಾನ್ ನಾಯಕ. ಅತ್ಯಂತ ಕಷ್ಟ ಕಾಲದಲ್ಲಿ ಭಾರತವನ್ನು ಎತ್ತಿ ಹಿಡಿದಿದ್ದಾರೆ. ಆಂತರಿಕ ಸುರಕ್ಷತೆ ತಂದು, ಗಡಿಗಳನ್ನು ರಕ್ಷಣೆ ಮಾಡಿದ್ದಾರೆ. ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಅವರು ಬಡವರ ಕೈ ಹಿಡಿದ ಬಡವರ ಬಂಧು ಎಂದರು.