ಸೋಮಣ್ಣ ಬಂದರೆ ಕೈಗೆ ಬಲ

ಬೆಂಗಳೂರು, ಮಾ. ೮- ವಸತಿ ಸಚಿವ ವಿ. ಸೋಮಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಬರುವುದಕ್ಕೆ ನಮ್ಮ ವಿರೋಧವಿಲ್ಲ. ಸೋಮಣ್ಣನವರು ಕಾಂಗ್ರೆಸ್‌ಗೆ ಬಂದರೆ ನಮಗೆ ಅನುಕೂಲವಾಗಲಿದೆ. ನಾವು ಹೃದಯಪೂರ್ವಕವಾಗಿ ಸೋಮಣ್ಣ ಅವರನ್ನು ಸ್ವಾಗತ ಮಾಡುತ್ತೇವೆ ಎಂದು ಮಾಜಿ ಸಚಿವ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದರು.
ಸಚಿವ ವಿ. ಸೋಮಣ್ಣನವರ ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್‌ನ ಲಿಂಗಾಯತ ಮುಖಂಡರ ವಿರೋಧವಿದೆ ಎಂಬ ಸುದ್ದಿಗಳು ಸುಳ್ಳು. ನಮ್ಮ ವಿರೋಧವೇನೂ ಇಲ್ಲ. ಅವರು ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಎಂದು ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಸೋಮಣ್ಣ ಅವರು ಕಾಂಗ್ರೆಸ್‌ಗೆ ಬರುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ. ಅವರು ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಸಚಿವ ವಿ. ಸೋಮಣ್ಣನವರು ರಾಜಾಜಿನಗರ ಕ್ಷೇತ್ರದ ಟಿಕೆಟ್ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದು ನನಗೆ ಗೊತ್ತಿಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಬೆಂಗಳೂರಿನ ಎರಡು ಕ್ಷೇತ್ರಗಳಲ್ಲಿ ಲಿಂಗಾಯಿತರಿಗೆ ಟಿಕೆಟ್ ನೀಡಿ ಎಂದು ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದೇವೆ. ಸೋಮಣ್ಣನವರು ಕಾಂಗ್ರೆಸ್‌ಗೆ ಬಂದರೆ ಹೆಚ್ಚು ಅನುಕೂಲ ಎಂದರು.
೬೮ ಕ್ಷೇತ್ರಗಳಲ್ಲಿ ಲಿಂಗಾಯಿತರಿಗೆ ಟಿಕೆಟ್: ಬೇಡಿಕೆ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ೬೮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೆಟ್ ಕೇಳಿದ್ದೇವೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಎಲ್ಲೆಲ್ಲಿ ಲಿಂಗಾಯತರು ಗೆಲ್ಲಲ್ಲಿದ್ದಾರೆ ಎಂಬ ವಿವರ ನೀಡಿದ್ದೇವೆ. ಕಡಿಮೆ ಎಂದರೂ ೫೫ ಕ್ಷೇತ್ರಗಳಲ್ಲಿ ಲಿಂಗಾಯತರಿಗೆ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.
ಕಳೆದ ಬಾರಿ ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೆ ೪೩ ಟಿಕೆಟ್ ನೀಡಲಾಗಿತ್ತು. ಈ ಬಾರಿ ಹೆಚ್ಚಿನ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ಲಿಂಗಾಯಿತರು ಕಾಂಗ್ರೆಸ್‌ಗೆ ಬೆಂಬಲ ನೀಡುವ ವಿಶ್ವಾಸವಿದೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.
ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ೪೩ ಲಿಂಗಾಯಿತ ಅಭ್ಯರ್ಥಿಗಳ ಪೈಕಿ ೧೩ ಮಂದಿ ಗೆಲುವು ಸಾಧಿಸಿದ್ದಾರೆ. ಹಾಗೆಯೇ ೪೩ ಕ್ಷೇತ್ರಗಳಲ್ಲಿ ಒಕ್ಕಲಿಗರು ಸ್ಪರ್ಧಿಸಿದ್ದರು. ಈ ಪೈಕಿ ೧೧ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ೧೭ ಮಂದಿ ಮುಸ್ಲಿಂರು ಸ್ಪರ್ಧಿಸಿದ್ದರು. ೭ ಮಂದಿ ಗೆದ್ದಿದ್ದಾರೆ. ಈ ಬಾರಿ ಲಿಂಗಾಯಿತರಿಗೆ ಹೆಚ್ಚಿನ ಟಿಕೆಟ್ ನೀಡಿದರೆ ಹೆಚ್ಚಿನ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಇದನ್ನು ವರಿಷ್ಠರ ಗಮನಕ್ಕೆ ತಂದಿದ್ದೇವೆ ಎಂದು ಅವರು ಹೇಳಿದರು.