ಸೋಮಣ್ಣ ಜಿಲ್ಲೆಗೆ ಬಂದರೆ ಸ್ವಾಗತ: ಜಿಲ್ಲಾ ವಕ್ತಾರರ ಹೇಳಿಕೆ ಬಾಲಿಶವಾದದ್ದು

ಚಾಮರಾಜನಗರ, ಮಾ.24:- ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಹಿರಿಯ ರಾಜಕಾರಣಿ, ಸಂಘಟನಾ ಚತುರ ವಿ. ಸೋಮಣ್ಣ ಅವರು ಜಿಲ್ಲೆಯ ಚುನಾವಣೆ ಉಸ್ತುವಾರಿಯನ್ನು ವಹಿಸಿಕೊಂಡರೆ, ಜಿಲ್ಲಾ ಬಿಜೆಪಿ ಸಂಪೂರ್ಣವಾಗಿ ಸ್ವಾಗತಿಸುತ್ತದೆ. ಪಕ್ಷ ನೀಡಿರುವ ಹುದ್ದೆಯನ್ನು ದುಬರ್ಳಕೆ ಮಾಡಿಕೊಂಡು ಹಿರಿಯ ರಾಜಕಾರಣಿಯೊಬ್ಬರಿಗೆ ಅಪಮಾನವಾಗುವ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಜಿ.ಪಂ. ಮಾಜಿ ಸದಸ್ಯ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್. ಬಾಲರಾಜು ತೀವ್ರವಾಗಿ ಖಂಡಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ದಿ ಹಾಗೂ ಪಕ್ಷ ಸಂಘಟನೆ ದೃಷ್ಠಿಯಿಂದ ವಿ. ಸೋಮಣ್ಣ ಅವರಿಗೆ ಬಿಜೆಪಿ ರಾಜ್ಯ ವರಿಷ್ಠರು ಉಸ್ತುವಾರಿ ಹುದ್ದೆಯನ್ನು ನೀಡಿದ್ದಾರೆ. ಆದರೆ ಏಕಾಏಕಿ ವಕ್ತಾರ ಶಿವಕುಮಾರ್ ಅವರು ಮಾಧ್ಯಮಗಳ ಮುಂದೆ ಸೋಮಣ್ಣ ಗೋಬ್ಯಾಕ್ ಎಂದು ಹೇಳಿರುವುದು ಜಿಲ್ಲಾ ಬಿಜೆಪಿಗೆ ಮಾಡಿರುವ ಅಪಮಾನವಾಗಿದೆ. ಇಂಥ ಹೇಳಿಕೆಯನ್ನು ಬಿಜೆಪಿಯ ಸಾಮಾನ್ಯ ಕಾರ್ಯಕರ್ತನು ಸಹ ಸಹಿಸುವುದಿಲ್ಲ. ಬಿಜೆಪಿ ಇವರ ಸ್ವಂತ ಆಸ್ತಿಯಲ್ಲ. ಯಾರು ಬೇಕಾದರು ಬಂದು, ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶವಿದೆ ಎಂದರು.
ಹೀಗಿದ್ದರು ಸಹ ಹಿರಿಯ ರಾಜಕಾರಣಿ, 45 ವರ್ಷಗಳ ಅನುಭವ ಹೊಂದಿರುವ ಸೋಮಣ್ಣ ವಿರುದ್ದ ಹೇಳಿಕೆ ನೀಡುವಷ್ಟು ದೊಡ್ಡ ವ್ಯಕ್ತಿ ಇವರಲ್ಲ. ಹಿರಿಯ ದಲಿತ ರಾಜಕಾರಣಿ ಮುತ್ಸದ್ಧಿಗಳಾದ ವಿ.ಶ್ರೀನಿವಾಸಪ್ರಸಾದ್ ಅವರೇ ಮೊನ್ನೆ ಕೊಳ್ಳೇಗಾಲದ ಕಾರ್ಯಕ್ರಮದಲ್ಲಿ ವಿ. ಸೋಮಣ್ಣ ಅವರ ಉಸ್ತುವಾರಿಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದ್ದಾರೆ. ಅವರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದ್ದರು. ಅವರ ಅನುಯಾಯಿ ಎಂದು ಹೇಳಿಕೊಳ್ಳುವ ಶಿವಕುಮಾರ್‍ಗೆ ಈ ರೀತಿ ಮಾತನಾಡುವಂತೆ ಹೇಳಿಕೊಟ್ಟವರು ಯಾರು ? ವಕ್ತಾರ ಹುದ್ದೆಯನ್ನು ನೀಡಿರುವುದು ಪಕ್ಷ ಸಂಘಟನೆ ಮಾಡುವುದಕ್ಕೆ ವಿನಃ ಗುಂಪುಗಾರಿಕೆಯನ್ನು ಪ್ರೋತ್ಸಾಹ ಮಾಡುವುದÀಕಲ್ಲ ಎಂದು ಬಾಲರಾಜು ಕಿಡಿಕಾರಿದರು.
ಈಗಾಗಲೇ ಶಿವಕುಮಾರ್ ಅವರು ನೀಡಿರುವ ಹೇಳಿಕೆ ರಾಜ್ಯ ಮತ್ತು ಜಿಲ್ಲಾ ವರಿಷ್ಠರ ಗಮನಕ್ಕೆ ಹೋಗಿದೆ. ಜಿಲ್ಲಾಧ್ಯಕ್ಷ ನಾರಾಯಣ್ ಪ್ರಸಾದ್ ಅವರು ಸಹ ನೋಟಿಸ್ ನೀಡಿರುವುದಾಗಿ ನಮಗೆ ತಿಳಿಸಿದ್ದಾರೆ. ಆದರೆ ಅವರೊಟ್ಟಿಗೆ ಗೋಷ್ಠಿಯಲ್ಲಿ ಕುಳಿತಿದ್ದ ಮಹಾಶಕ್ತಿ ಕೇಂದ್ರದ ಅಧ್ಯಕ್ಷರುಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅವರು ಸಹ ನಮಗೆ ಪಕ್ಷದ ವಿರುದ್ದ ಮಾತನಾಡುವ ಬಗ್ಗೆ ಮಾಹಿತಿ ಇಲ್ಲದೇ ವಕ್ತಾರರು ವೈಯಕ್ತಿಕವಾಗಿ ನಮ್ಮನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ಅತ್ಮೀಯರಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಇಂಥ ಹೇಳಿಕೆಯನ್ನು ಬಿಜೆಪಿಯ ಮುಖಂಡರಾದ ನಾವೆಲ್ಲರು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಬಾಲರಾಜು ತಿಳಿಸಿದರು.
ವಿ. ಸೋಮಣ್ಣ ಅವರ ರಾಜಕಾರಣ ಮತ್ತು ಅವರ ಅಭಿವೃದ್ದಿ ವಿಚಾರವನ್ನು ತಿಳಿಯದವರು ಇಂಥ ಹೇಳಿಕೆ ನೀಡಲು ಸಾಧ್ಯ. ವಿ. ಸೋಮಣ್ಣ ಅವರು 2003 ರಿಂದಲು ನಾನು ಬಲ್ಲೆ. ಲೋಕಸಭಾ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕರೇ ಇಲ್ಲದ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮುರ್ತಿ ಅವರನ್ನು ಗೆಲುವಿನವರೆಗೆ ತೆಗೆದುಕೊಂಡು ಹೋಗಿದ್ದರು. 2006 ರ ಜಿ.ಪಂ. ತಾ.ಪಂ. ಚುನಾವÀಣೆಯಲ್ಲಿ ಉಸ್ತುವಾರಿಯಾಗಿದ್ದ ಸೋಮಣ್ಣ ತಮ್ಮ ತಾಕತ್ತು ತೋರಿಸಿದ್ದಾರೆ. ಅಲ್ಲದೆ ಉಪ ಚುನಾವಣೆಗಳ ನೇತೃತ್ವವಹಿಸಿಕೊಂಡು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವ ಜಿಲ್ಲೆಗೆ ಅವಶ್ಯಕವಾಗಿದೆ ಎಂದರು.
ಚಾ.ನಗರ ಕ್ಷೇತ್ರ ಸೋಮಣ್ಣ ಸೂಕ್ತ:
ಜಿ.ಪಂ.ಮಾಜಿ ಅಧ್ಯಕ್ಷ ಎ.ಎಸ್. ನಟರಾಜು ಮಾತನಾಡಿ, ವಿ, ಸೋಮಣ್ಣ ಅವರನ್ನು ಚಾ.ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಮಾಡುವುದು ಸೂಕ್ತವಾಗಿದೆ. ಗೆಲುವು ಗ್ಯಾರಂಟಿ. ಕಳೆದ ಮೂರು ಅವಧಿ ಚುನಾವಣೆಯಲ್ಲಿ ಸ್ಥಳಿಯ ಆಕಾಂಕ್ಷಿಗಳ ಕಚ್ಚಾಟ, ಕಾಲೆಳೆಯುವ ಪ್ರವೃತ್ತಿಯಿಂದ ಬಿಜೆಪಿಗೆ ಹಿನ್ನಡೆಯಾಗಿದೆ. ಇದನ್ನುರಿತು ರಾಜ್ಯ ವರಿಷ್ಠರು ವಿ. ಸೋಮಣ್ಣ ಅವರಿಗೆ ಜಿಲ್ಲಾ ಚುನಾವಣೆ ಉಸ್ತುವಾರಿ ವಹಿಸಿ, ಜಿಲ್ಲೆಯ ನಾಲ್ಕು ಕ್ಷೇತ್ರಗಳನ್ನು ಗೆಲ್ಲುವ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಇದನ್ನು ಸಹಿಸದ ಪಕ್ಷದ ವಿರೋಧಿಗಳು ಶಿವಕುಮಾರ್ ಮುಖಾಂತರ ಇಂಥ ಬಾಲಿಶ ಹೇಳಿಕೆಯನ್ನು ಕೊಡಿಸಿದ್ದಾರೆ. ಸೋಮಣ್ಣ ಅವರಿಗೆ ಗೋ ಬ್ಯಾಕ್ ಅಲ್ಲ. ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ರತ್ನಕಂಬಳಿ ಹಾಸಿ ಸಂಪೂರ್ಣವಾಗಿ ಸ್ವಾಗತಿಸುತ್ತೇವೆ ಎಂದು ಆಲೂರು ನಟರಾಜು ತಿಳಿಸಿದರು.
ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್ ಮಾತನಾಡಿ, ಕ್ಷೇತ್ರದ 26 ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರ ಅಭಿಪ್ರಾಯವು ಸಹ ಸೋಮಣ್ಣ ವಿರುದ್ದವಾಗಿದೆ ಎಂದು ಹೇಳಿಕೆ ನೀಡಿರುವ ಶಿವಕುಮಾರ್ ಎಲ್ಲರನ್ನು ಒಂದೆಡೆ ಸೇರಿಸಲಿ ಎಂದು ಸವಾಲು ಹಾಕಿದರು. ಈಗ ಹೋಗಿರುವ ಶಕ್ತಿ ಕೇಂದ್ರ ಅಧ್ಯಕ್ಷರುಗಳಲ್ಲಿ ಮೂವರು ಮಾಹಿತಿ ಇಲ್ಲದೇ ಹೋಗಿದ್ದೇವೆ ಎಂದು ನಮ್ಮ ಬಳಿ ಅಳಲು ತೊಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.
ಗೋಷ್ಠಿಯಲ್ಲಿ ಗುಂಡ್ಲುಪೇಟೆ ಪುರಸಭಾ ಅಧ್ಯಕ್ಷ ಗಿರೀಶ್, ಗುಂಡ್ಲುಪೇಟೆ ಎಪಿಎಂಸಿ ಅಧ್ಯಕ್ಷ ಕಮರಹಳ್ಳಿ ರವಿ, ನಗರಸಭಾ ಸದಸ್ಯರಾದ ಶಿವರಾಜು, ಚಂದ್ರಶೇಖರ್ ಇದ್ದರು.