ಸೋನು ನಿಗಮ್ ತಂದೆ ಮನೆಯಲ್ಲಿ ಕಳವು ಆರೋಪಿ ಸೆರೆ

ಮುಂಬಯಿ,ಮಾ.೨೩- ಖ್ಯಾತ ಗಾಯಕ ಸೋನು ನಿಗಮ್ ತಂದೆ ವಾಸವಿರುವ ಮನೆಯಲ್ಲಿ ನಡೆದ ೭೨ ಲಕ್ಷ ರೂ ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರ ಮಾಜಿ ಕಾರು ಚಾಲಕನನ್ನು ಬಂಧಿಸಿದ್ದಾರೆ.
ಸೋನು ನಿಗಮ್ ತಂದೆ ಆಗಮ್‌ಕುಮಾರ್ ನಿಗಮ್ ಅಂಧೇರಿ ಪಶ್ಚಿಮದ ಓಶಿವಾರದಲ್ಲಿರುವ ವಿಂಡ್ಸರ್ ಗ್ರ್ಯಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಮನೆಯಲ್ಲಿ ಕಳೆದ ಮಾರ್ಚ್ ೧೯ ಮತ್ತು ಮಾರ್ಚ್ ೨೦ ರ ನಡುವೆ ಕಳ್ಳತನ ನಡೆದಿತ್ತು. ಸೋನು ನಿಗಮ್ ಅವರ ತಂಗಿ ನಿಕಿತಾ ಅವರು ಮನೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಓಶಿವಾರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ಪ್ರಕಾರ, ಆಗಮಕುಮಾರ್ ನಿಗಮ್ ಅವರು ಸುಮಾರು ೮ ತಿಂಗಳಿನಿಂದ ರೆಹಾನ್ ಎಂಬ ಕಾರು ಚಾಲಕನನ್ನು ಇರಿಸಿಕೊಂಡಿದ್ದರು.ಆದರೆ ಆತನ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲದ ಕಾರಣ ಇತ್ತೀಚೆಗೆ ಅವರನ್ನು ತೆಗೆದುಹಾಕಲಾಗಿತ್ತು.ಮಾ.೧೯ರ ಮಧ್ಯಾಹ್ನ ಈತ ವರ್ಸೋವಾ ಪ್ರದೇಶದ ನಿಕಿತಾ (ಸೋನು ನಿಗಮ್ ತಂದೆ ಮನೆ) ಅವರ ಮನೆಗೆ ಊಟಕ್ಕೆ ಆಗಮಿಸಿ ನಂತರ ಸ್ವಲ್ಪ ಹೊತ್ತಿನ ನಂತರ ಹೊರಟು ಹೋಗಿದ್ದ.ಇದೇ ದಿನ ಸಂಜೆ ವೇಳೆ ತಮ್ಮ ಮಗಳಿಗೆ ಕರೆ ಮಾಡಿದ ಸೋನು ನಿಗಮ್ ತಂದೆ , ಮರದ ಕಬೋರ್ಡ್‌ನಲ್ಲಿ ಇರಿಸಲಾಗಿದ್ದ ಡಿಜಿಟಲ್ ಲಾಕರ್‌ನಿಂದ ೪೦ ಲಕ್ಷ ನಾಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಮರುದಿನ,ಆಗಮಕುಮಾರ್ ನಿಗಮ್ ವೀಸಾ ಸಂಬಂಧಿತ ಕೆಲಸದ ನಿಮಿತ್ತ ೭ ಬಂಗಲೆ ಬಳಿ ಇರುವ ಮಗನ ಮನೆಗೆ ಹೋಗಿ ಸಂಜೆ ಮರಳಿದ್ದರು. ನಂತರ ಬಂದು ನೋಡಿದಾಗ ಡಿಜಿಟಲ್ ಲಾಕರ್‌ನಿಂದ ಮತ್ತೆ ೩೨ ಲಕ್ಷ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ.
ನಂತರ ಆಗಮ್‌ಕುಮಾರ್ ಹಾಗೂ ನಿಕಿತಾ ತಾವಿರುವ ಅಪಾರ್ಟ್‌ಮೆಂಟ್‌ನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅವರ ಮಾಜಿ ಕಾರು ಚಾಲಕ ರೆಹಾನ್ ಎರಡು ದಿನವೂ ಫ್ಲಾಟ್‌ನಿಂದ ಬ್ಯಾಗನ್ನು ಹಿಡಿದು ತೆರಳುತ್ತಿರುವುದು ಕಂಡು ಬಂದಿದೆ. ರೆಹಾನ್ ತನ್ನ ಫ್ಲ್ಯಾಟ್‌ಗೆ ನಕಲಿ ಕೀ ಸಹಾಯದಿಂದ ಪ್ರವೇಶಿಸಿ ಮಲಗುವ ಕೋಣೆಯಲ್ಲಿದ್ದ ಡಿಜಿಟಲ್ ಲಾಕರ್‌ನಿಂದ ೭೨ ಲಕ್ಷ ಕದ್ದಿದ್ದಾನೆ ಎಂದು ಆಗಮ್‌ಕುಮಾರ್ ಅನುಮಾನ ವ್ಯಕ್ತಪಡಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಯೊಬ್ಬರು ತಿಳಿಸಿದ್ದಾರೆ.
ನಂತರ ಅವರ ಪುತ್ರಿ ನಿಕಿತಾ ಓಶಿವಾರ ಠಾಣೆಗೆ ಭೇಟಿ ನೀಡಿ ಪೊಲೀಸರಿಗೆ ದೂರು ನೀಡಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೮೦, ೪೫೪ ಮತ್ತು ೪೫೭ ರ ಅಡಿಯಲ್ಲಿ ಕಳ್ಳತನ ಮತ್ತು ಮನೆಗೆ ಅತಿಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ದೂರು ದಾಖಲಿಸಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.